ಖಾಕಿ ಪಡೆ ನಿರಂತರವಾಗಿ ರೌಡಿಗಳ ಮನೆಗಳ ಮೇಲೆ ದಾಳಿ ಮುಂದುವರೆಸಿದ್ದು, ಇಂದು ಬೆಳ್ಳಂಬೆಳಗ್ಗೆ ಪೂರ್ವ ವಿಭಾಗದ ಕೆಜಿ ಹಳ್ಳಿ ಉಪವಿಭಾಗದ ಮೂರು ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ರೌಡಿ ಒಬ್ಬನ ಮನೆಯಲ್ಲಿ ಮಾದಕವಸ್ತು ಪತ್ತೆಯಾಗಿದೆ.
ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಬಾಗಿಲು ತಟ್ಟಿದ ಪೊಲೀಸರನ್ನು ಕಂಡು ರೌಡಿಗಳು ಒಂದು ಕ್ಷಣ ಶಾಕ್ ಆದರು.
ಈ ದಾಳಿ ಮುಂಜಾನೆ 5 ಗಂಟೆಯಿಂದ 10 ಗಂಟೆಯವರೆಗೆ ಅಂದರೆ ಸತತ 5 ಗಂಟೆಗಳ ಕಾಲ ನಿರಂತರವಾಗಿ ನಡೆದಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ, ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ 160 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಕೆಲವು ರೌಡಿಗಳ ಮನೆ ಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.
ರೌಡಿಗಳನ್ನು ಠಾಣೆಗೆ ಕರೆದೊಯ್ದು ಪ್ರಸ್ತುತ ಮಾಡುತ್ತಿರುವ ಕೆಲಸ, ವಾಸಸ್ಥಳದ ಖಾಯಂ ವಿಳಾಸ ಹಾಗೂ ಮೊಬೈಲ್ ನಂಬರ್‍ಗಳನ್ನು ಪಡೆದು ಬಾಲ ಬಿಚ್ಚದಂತೆ ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ರೌಡಿ ಮನೆಯಲ್ಲಿ 105 ಕೆಜಿ ಗಾಂಜಾ ಪತ್ತೆ:
ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ರಸ್ತೆಯಲ್ಲಿರುವ ರೌಡಿ ಆಸೀಫ್ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಮಂಚದ ಕೆಳಗೆ ಮೂಟೆ ಕಟ್ಟಿ ಬಚ್ಚಿಟ್ಟಿದ್ದ 105 ಕೆಜಿ ಗಾಂಜಾ ಮತ್ತು 8 ಗ್ರಾಂ ಎಂಡಿಎಂಎ ಮಾದಕ ವಸ್ತು, ಒಂದು ಡ್ರಾಗನ್ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದು ಆಸೀಫ್‍ನನ್ನು ವಿಚಾರಣೆಗೊಳಪಡಿಸಿದ್ದಾರೆ.
ಈತನ ಸಹಚರರು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದ್ದು, ಅವರ ಶೋಧ ಕಾರ್ಯ ಮುಂದುವರೆದಿದೆ.