ಬಹುಕೋಟಿ ಅಕ್ರಮ ವ್ಯವಹಾರ ನಡೆದಿದೆ\’ ಎನ್ನಲಾದ ಬಿಟ್ ಕಾಯಿನ್ (ಬಿಟಿಸಿ) ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಸಿಐಡಿ ಡಿಜಿಪಿ ಎಂ. ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ.
ಕಾಟನ್ಪೇಟೆ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ \’ಬಿಟ್ ಕಾಯಿನ್ ಪ್ರಕರಣದ ಸಂಗತಿಗಳನ್ನು ಪತ್ರದಲ್ಲಿ ಉಲ್ಲೇಖಿಸಿರುವ ದಯಾನಂದ್, \’ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನವಿದೆ. ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆ ನಡೆಸಲು ಕ್ರಮ ಕೈಗೊಳ್ಳಿ\’ ಎಂದು ಕೋರಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯಾದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧಿಸಿದ್ದ ಸಿಸಿಬಿ ಪೊಲೀಸರು, ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ (https://eproc. karnataka. gov. in) ಜಾಲತಾಣ ಹ್ಯಾಕ್ ಮಾಡಿ * 46 ಕೋಟಿ ದೋಚಿದ್ದ ಸಂಗತಿ ಪತ್ತೆ ಮಾಡಿದ್ದರು. ಜೊತೆಗೆ, ಶ್ರೀಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ಪ್ರಕರಣಗಳು ಹೊರಬಂದಿದ್ದವು.
ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದೀಗ, ಪೊಲೀಸ್ ಕಮಿಷನರ್ ಅವರೇ ತನಿಖೆ ಮುಂದುವರಿಸಲು ಆಸಕ್ತಿ ತೋರಿಸಿದ್ದಾರೆ.
ಗೃಹ ಸಚಿವರ ಸೂಚನೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ \’ಬಿಟ್ ಕಾಯಿನ್ (ಬಿಟಿಸಿ) ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ ಇತ್ತೀಚೆಗಷ್ಟೇ ತಿಳಿಸಿದ್ದರು. ಜೊತೆಗೆ, ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.
ಇದರ ಬೆನ್ನಲ್ಲೇ ಕಮಿಷನರ್ ದಯಾನಂದ್ ಅವರು ಸಿಐಡಿ ಡಿಜಿಪಿ ಅವರಿಗೆ ಪತ್ರ ಬರೆದಿದ್ದು, ಸದ್ಯದಲ್ಲೇ ಪ್ರಕರಣದ ಮರು ತನಿಖೆ ಆರಂಭವಾಗುವ ಸಾಧ್ಯತೆ ಇದೆ.
ಪತ್ರದ ಬಗ್ಗೆ \’ಪ್ರಜಾವಾಣಿ\’ ಜೊತೆ ಮಾತನಾಡಿದ ಬಿ. ದಯಾನಂದ್, \’ಪ್ರಕರಣದಲ್ಲಿ ಸಾಕಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವ್ಯಕ್ತಿಗಳು ಶಾಮೀಲಾಗಿರುವ ಮಾಹಿತಿ ಇದೆ. ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆ ನಡೆಸುವಂತೆ ಸಿಐಡಿ ಡಿಜಿಪಿಗೆ ಪತ್ರ ಬರೆಯಲಾಗಿದೆ\’ ಎಂದರು.
ಕಾಟನ್ಪೇಟೆಯಲ್ಲಿ ದಾಖಲಾಗಿರುವ ಪ್ರಕರಣದ ಕೆಲ ಸಂಗತಿಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಿಐಡಿಯಿಂದ ವಿಶೇಷ ತಂಡ ರಚನೆಯಾದ ನಂತರ, ಅವರ ತನಿಖೆಗೆ ಬೇಕಾದ ದಾಖಲೆಗಳನ್ನು ಒದಗಿಸಲಾಗುವುದು\’ ಎಂದು ಹೇಳಿದರು.