ಬೆಂಗಳೂರು: ಹೊಸ ವರ್ಷದ ಮುನ್ನಾದಿನ ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿದ 318 ವಾಹನಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪೈಕಿ ವಶಪಡಿಸಿಕೊಂಡ 318 ವಾಹನಗಳ ಪೈಕಿ 280 ದ್ವಿಚಕ್ರ ವಾಹನಗಳು, 28 ನಾಲ್ಕು ಚಕ್ರ ವಾಹನಗಳು ಮತ್ತು 10 ತ್ರಿಚಕ್ರ ವಾಹನಗಳು ಸೇರಿವೆ. ರಾತ್ರಿ ಕರ್ಫ್ಯೂ ಗಡುವನ್ನು ಮೀರಿ ವಾಹನ ಸವಾರರು ಯಾವುದೇ ಉದ್ದೇಶವಿಲ್ಲದೆ ತಿರುಗಾಡುತ್ತಿದ್ದರು. ಹೀಗಾಗಿ ಇಂತಹ ವಾಹನಗಳನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಮತ್ತು ಕೋವಿಡ್-19 ಸೋಂಕು ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹೇರಿತ್ತು. ಹೊಸ ವರ್ಷ ಆಚರಣೆ ದಿನ ಅಂದರೆ ನಿನ್ನೆಯಿಂದಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿತ್ತು. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದ್ದು, ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಜನರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.