ದಿನಾಂಕ:09-02-2022 ರಂದು ಬೆಳಿಗ್ಗೆ ಜಿಲ್ಲಾ ಪೋಲೀಸ್ ಕವಾಯತು ಮೈದಾನ ಕಾರವಾರದಲ್ಲಿ 14 ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ನೆರವೇರಿತು.
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿಯಲ್ಲಿ ಒಟ್ಟೂ 121 ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಪರಿಪೂರ್ಣ ಪೊಲೀಸ್ ತರಬೇತಿಯನ್ನು ಮುಗಿಸಿರುತ್ತಾರೆ. ಈ ಮಹಿಳಾ ಪ್ರಶಿಕ್ಷಣಾರ್ಥಿಗಳಲ್ಲಿ 26 ಪ್ರಶಿಕ್ಷಣಾರ್ಥಿಗಳು ಸ್ನಾತಕೋತ್ತರ ಪದವಿ, 13 ಪ್ರಶಿಕ್ಷಣಾರ್ಥಿಗಳು ಇಂಜಿನಿಯರಿಂಗ್ ಪದವಿ ಮತ್ತು 71 ಪ್ರಶಿಕ್ಷಣಾರ್ಥಿಗಳು ಪದವೀಧರರಾಗಿದ್ದು 03 ಜನ ವೃತ್ತಿಪರ ಶಿಕ್ಷಣ ಹಾಗೂ 06 ಜನ ಪ್ರಶಿಕ್ಷಣಾರ್ಥಿಗಳು ಪಿ.ಯು.ಸಿ ಶಿಕ್ಷಣ ಪೂರೈಸಿರುತ್ತಾರೆ. ಇವರುಗಳ ಆಕರ್ಷಕ ಪಥಸಂಚಲನದ ನಂತರ ಶ್ರೀ ಎಸ್. ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ಪ್ರಾಂಶುಪಾಲರು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಕಾರವಾರ, ರವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿರುತ್ತಾರೆ.

ಈ ನಿರ್ಗಮನ ಪಥಸಂಚಲನದಲ್ಲಿ ತರಬೇತಿಯ ಒಳಾಂಗಣ ಮತ್ತು ಹೊರಾಂಗಣ ಪರೀಕ್ಷೆಯಲ್ಲಿ ಹಾಗೂ ಬಂದೂಕುಗುರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಒಟ್ಟು 12 ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮತ್ತು ಈ ಬಾರಿಯ ತರಭೇತಿಯಲ್ಲಿ, ಮ.ಪಿ.ಸಿ. ಅಂಬಿಕಾ ಬಾಯಿ. ಕೆ. ಇವರು ಸರ್ವೋತ್ತಮ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರು ಮೂಲತ: ಮೈಸೂರು ಜಿಲ್ಲೆಯವರಾಗಿದ್ದು ಬೆಂಗಳೂರು ನಗರ ಘಟಕದವರಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಶ್ರೀ ದಿಲೀಪ್ ಎಸ್.ವಿ. ಪೋಲೀಸ್ ಉಪಾಧೀಕ್ಷಕರು, ಡಿ.ಎ.ಆರ್, ಮತ್ತು ಉಪ ಪ್ರಾಂಶುಪಾಲರು, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಕಾರವಾರ, ರವರು ಮುಖ್ಯ ಅತಿಥಿಯವರನ್ನು ಸ್ವಾಗತಿಸಿರುತ್ತಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ. ಡಾ. ಸುಮನ ಪೆನ್ನೇಕರ, ಐ.ಪಿ.ಎಸ್. ಆದ ನಾನು ಭಾಗಿಯಾಗಿದ್ದು,ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಕವಾಯತು ಉತ್ತಮವಾಗಿತ್ತು. ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ಮಹಿಳಾ ಪೊಲೀಸರು ಪುರಷ ಪೊಲೀಸ್ ಕರ್ತವ್ಯಕ್ಕೆ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ನಿಮ್ಮ ಠಾಣೆಗಳಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಎಲ್ಲರೂ ಉನ್ನತ ಶಿಕ್ಷಣ ಪಡೆದಿದ್ದು ಇನ್ನು ಉನ್ನತ ಹುದ್ದೆ ಸಿಗುವಂತಾಗಲಿ ಎಂದು ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿರುತ್ತೇನೆ.
