ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಡ್ರಗ್ಸ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದ ಒಬ್ಬ ವಿದೇಶಿ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದು ಆತನಿಂದ 16 ಕೆಜಿ ತೂಕದ ಎಂಡಿಎಂಎ ಕ್ರಿಸ್ಟಲ್, 500 ಗ್ರಾಂ ತೂಕದ ಕೊಕೇನ್, ಒಂದು ಮೊಬೈಲ್, 3 ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 21 ಕೋಟಿ ರೂಗಳಾಗಿರುತ್ತದೆ.
ವಿದೇಶಿ ಪ್ರಜೆಯಾಗಿರುವ ಆರೋಪಿಯು 1 ವರ್ಷದ ಹಿಂದೆ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು, ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸವಿರುತ್ತಾನೆ. 2024 ರ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳಿಗೆ ನಿಷೇದಿತ ಮಾದಕ ವಸ್ತುಗಳಾದ ಎಂ.ಡಿ.ಎಂ.ಎ ಕ್ರಿಸ್ಟಲ್ ಮತ್ತು ಕೊಕೇನ್ ಅನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದೆಹಲಿ, ಮುಂಬೈ ಹಾಗೂ ಇತರೆ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿ ಮೂಲದ ವ್ಯಕ್ತಿಗಳಿಂದ ಚೂಡಿದಾರ್ ಬಟ್ಟೆಗಳಲ್ಲಿ, ಬೆಡ್‌ಶೀಟ್ ಕವರ್‌ಗಳಲ್ಲಿ, ಸೋಪ್ ಬಾಕ್ಸ್ ಮತ್ತು ಚಾಕಲೇಟ್ ಬಾಕ್ಸ್‌ಗಳಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ಅಡಗಿಸಿ ಯಾರಿಗೂ ಅನುಮಾನ ಬರದಂತೆ ಖರೀದಿ ಮಾಡಿಕೊಂಡು ಬಂದು ತನ್ನ ವಾಸದ ಮನೆಯಲ್ಲಿರಿಸಿಕೊಂಡಿರುತ್ತಾನೆ. ಹೊಸ ವರ್ಷದ ಆಚರಣೆಯ ಸಮಯದಲ್ಲಿ ಹೆಚ್ಚಿನ ಬೆಲೆಗೆ ಬೆಂಗಳೂರು ನಗರದಲ್ಲಿ ನಡೆಯುವ ಪಾರ್ಟಿಗಳಿಗೆ, ಗ್ರಾಹಕರುಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುವ ಉದ್ದೇಶದಿಂದ ಮಾದಕ ವಸ್ತುಗಳನ್ನು ಸಂಗ್ರಹಿಸಿ ಗೌಪ್ಯವಾಗಿ ಶೇಖರಿಸಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಆರೋಪಿಯ ವಿರುದ್ದ ದಿನಾಂಕ:11-12-2023 ರಂದು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಮತ್ತು ವಿದೇಶಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಮಾನ್ಯ, ಹೆಚ್ಚುವರಿ ಪೊಲೀಸ್ ಆಯುಕ್ತರು(ಪ), ಜಂಟಿ ಪೊಲೀಸ್ ಆಯುಕ್ತರು, ಅಪರಾಧ ಬೆಂಗಳೂರು ನಗರ ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ- 2 ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತಾರೆ.