ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ 4ನೇ ಬ್ಲಾಕ್‌ನಲ್ಲಿ, ದಿನಾಂಕ 07-09-2023 ರಂದು ಮಧ್ಯಾಹ್ನದ ವೇಳೆಯಲ್ಲಿ 71 ವರ್ಷದ ವೃದ್ಧ ಮಹಿಳೆಯು ನಡೆದುಕೊಂಡು ಹೋಗುತ್ತಿದ್ದಾಗ, ಹಿಂಬದಿಯಿಂದ ಒಬ್ಬ ಅಪರಿಚಿತ ವ್ಯಕ್ತಿ ನಡೆದುಕೊಂಡು ಬಂದು ಏಕಾಏಕಿ ಪಿರಾದುದಾರರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಹೋಗಿರುತ್ತಾರೆಂದು, ನೀಡಿದ ದೂರಿನ ಮೇರೆಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಸಮೀಪದ ಹಲವಾರು ಸಿ.ಸಿ.ಕ್ಯಾಮರಾಗಳನ್ನು ಪರಿಶೀಲಿಸಿ, ಆರೋಪಿಯ ಚಹರೆಯನ್ನು ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ಮಾಹಿತಿ ಸಂಗ್ರಹಿಸಿ ಕೃತ್ಯ ವರದಿಯಾದ ಕೆಲವೇ ಗಂಟೆಗಳಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ, ಆತನು ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ದಸ್ತಗಿರಿ ಮಾಡಿ, ಆತನಿಂದ ಸುಮಾರು 12 ಲಕ್ಷ ರೂ. ಮೌಲ್ಯದ 37 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್ ರವರ ಮಾರ್ಗದರ್ಶನದಲ್ಲಿ, ಶ್ರೀ ಹೆಚ್. ಕೃಷ್ಣಮೂರ್ತಿ, ಎಸಿಪಿ ಮಲ್ಲೇಶ್ವರಂ ಉಪ ವಿಭಾಗ ಮತ್ತು ಶ್ರೀ ಲಕ್ಷ್ಮಣ್ ಜೆ, ಪೊಲೀಸ್ ಇನ್ಸ್‌ಪೆಕ್ಟರ್, ನಂದಿನಿಲೇಔಟ್ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ಆರೋಪಿಯನ್ನು ದಸ್ತಗಿರಿ ಮಾಡಿ, ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.