ರಾಮಮೂರ್ತಿ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ-18-01-2023 ರಂದು ರಾತ್ರಿ ವೇಳೆಯಲ್ಲಿ ಕಲ್ಕೆರೆ , ಸರ್ಕಾರಿ ಶಾಲೆ ಮುಂಭಾಗ ನಿಲ್ಲಿಸಿದ್ದ ಒಂದು ಹೊಂಡಾ ಆಕ್ಟಿವಾ 6 ಜಿ ದ್ವಿ-ಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣವನ್ನು ಪತ್ತೆಹಚ್ಚಲು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ಕಾರ್ಯೋನ್ಮುಖರಾಗಿ ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳ ಮಾಹಿತಿ ಮೇರೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯ 03 ಕಳವು ಪ್ರಕರಣ, ಬಾಣಸವಾಡಿ, ಮೈಕೋ ಲೇಔಟ್, ಕೆ.ಜಿ.ಹಳ್ಳಿ ಠಾಣೆಯ ತಲಾ 01 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ, ಆರೋಪಿಗಳ ವಶದಿಂದ ಒಟ್ಟು 06 ದ್ವಿ- ಚಕ್ರ ವಾಹನಗಳನ್ನು ಹಾಗೂ ಒಂದು ಪ್ಯಾಸೆಂಜರ್ ಆಟೋ ರೀಕ್ಷಾವನ್ನು ಅಮಾನತ್ತು ಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ ಸುಮಾರು 8,00,000/-(ಎಂಟು ಲಕ್ಷ ರೂಪಾಯಿಗಳು).
ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ಆದ ಶ್ರೀ ಭೀಮಶಂಕರ್ ಗುಳೇದ್ ಹಾಗೂ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ ಉಮಾಶಂಕರ್ ಎಂ.ಹೆಚ್ ರವರ ಮಾರ್ಗದರ್ಶನದಲ್ಲಿ ರಾಮಮೂರ್ತಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರಂಗಸ್ವಾಮಿ ಹೆಚ್.ಎಂ ನೇತೃತ್ವದಲ್ಲಿ ಶ್ರೀ ಅಮರೇಶ್ ಜೇಗರಕಲ್ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಬಿ.ದಯಾನಂದ ರವರು ಹಾಗೂ ಅಪರ ಪೊಲೀಸ್ ಆಯುಕ್ತರು, ಪೂರ್ವ, ಶ್ರೀ ರಮನ್‌ಗುಪ್ತ ರವರು ಪ್ರಶಂಶಿಸಿರುತ್ತಾರೆ.