ದಿನಾಂಕ:20/06/2023 ರಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ದೂರಿನಲ್ಲಿ ಕೆಂಚನಪುರ ಕ್ರಾಸ್ನಲ್ಲಿರುವ ಸಂತೋಷ್ ಸೋಶಿಯಲ್ ಸರ್ವೀಸ್ ಸೊಸೈಟಿ (ರಿಯಾಬಿಲಿಟೇಷನ್ ) ಸೆಂಟರ್ ನ ಮಾಲೀಕನಿಗೆ ಮೊಬೈಲ್ ಮುಖಾಂತರ ದಮ್ಮಿ ಹಾಕಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಸದರಿ ಮಾಲೀಕರು ಹಣ ಕೊಡಲು ನಿರಾಕರಿಸಿದ್ದರು. ನಂತರ ರಿಯಾಬಿಲಿಟೇಷನ್ ಸೆಂಟರ್ ಹತ್ತಿರ ಬಂದ 7-8 ಜನ ಆಸಾಮಿಗಳು ಮ್ಯಾನೇಜರ್ ಬಳಿ, ಮಾಲೀಕರ ಬಗ್ಗೆ ವಿಚಾರಿಸಿದ್ದು, ಮ್ಯಾನೇಜರ್ ರವರು ಮಾಲೀಕರು ಇಲ್ಲವೆಂದು ತಿಳಿಸಿದ ಮೇರೆಗೆ ಸದರಿ ಗುಂಪು ಮ್ಯಾನೇಜರ್ ಅನ್ನು ಕಿಡ್ನಾಪ್ ಮಾಡಿ ಮಾಲೀಕನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಪ್ರಕರಣ ದಾಖಲಿಸಿಕೊಂಡ ಜ್ಞಾನಭಾರತಿ ಪೊಲೀಸ್ ಠಾಣೆಯವರು ಕಾರ್ಯಪ್ರವೃತ್ತರಾಗಿ, ಕ್ಷಿಪ್ತ ಕಾರ್ಯಾಚರಣೆ ನಡೆಸಿ ನಂಜನಗೂಡು ಬಸ್ ನಿಲ್ದಾಣದ ಬಳಿ ಅಪಹರಣಕ್ಕೊಳಗಾದ ವ್ಯಕ್ತಿ ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ರವರಾದ ಡಾ ಲಕ್ಷ್ಮಣ ನಿಂಬರಗಿ ರವರ ಸೂಕ್ತ ಮಾರ್ಗದರ್ಶನದಲ್ಲಿ, ಕೆಂಗೇರಿ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ರವರಾದ ಶ್ರೀ.ಹೆಚ್.ಎಸ್.ಪರಮೇಶ್ವರ್ ರವರ ನಿರ್ದೇಶನದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಸುಬ್ರಮಣಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ರವರು ಪ್ರಶಂಸಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು