ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿ-ಐಜಿಪಿ) ಪ್ರವೀಣ್ ಸೂದ್ ಅವರನ್ನು ಸಿಬಿಐನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಹಾಲಿ ಸಿಬಿಐ ನಿರ್ದೇಶಕರಾಗಿರುವ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಇದೇ ಮೇ. ೨೫ ರಂದು ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ೧೯೮೬ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ಪ್ರವೀಣ್ ಸೂದ್ ಅವರ ಅಧಿಕಾರಾವಧಿ ಇನ್ನೂ ಒಂದು ವರ್ಷ ಇತ್ತು. ಈಗ ಅವರು ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ರಾಜ್ಯಕ್ಕೆ ಹೊಸ ಪೊಲೀಸ್ ಮಹಾ ನಿರ್ದೇಶಕರಾಗಲು ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಪೈಪೋಟಿ ಎದುರಾಗಿದೆ.
ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಡಿಜಿಪಿ ಡಾ. ಅಲೋಕ್ ಮೋಹನ್, ತರಬೇತಿ ವಿಭಾಗದ ಡಿಜಿಪಿ ಡಾ.ಪಿ. ರವೀಂದ್ರನಾಥ್, ನೇಮಕಾತಿ ವಿಭಾಗದ ಡಿಜಿಪಿ ಕಮಲ್‌ಪಂತ್, ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್‌ರೆಡ್ಡಿ ಹೆಸರು ಕೇಳಿ ಬಂದಿವೆ..
ಸೇವಾ ಜೇಷ್ಠತೆ ಆಧಾರದಲ್ಲಿ ಡಾ. ಅಲೋಕ್ ಮೋಹನ್ ಹಾಗೂ ಪ್ರಾಮಾಣಿಕ ದಕ್ಷ ಅಧಿಕಾರಿ ಕಮಲ್ ಪಂತ್ ಅವರಲ್ಲಿ ಒಬ್ಬರನ್ನು ಸರ್ಕಾರ ಡಿಜಿ-ಐಜಿ ಹುದ್ದೆಗೆ ಪರಿಗಣಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಹಲವು ವಿವಾದಗಳಲ್ಲಿ ಸಿಲುಕಿರುವ ರವೀಂದ್ರನಾಥ್, ಇತ್ತೀಚೆಗಷ್ಟೇ ಡಿಜಿಪಿ ಹುದ್ದೆಗೆ ಬಡ್ತಿ ಪಡೆದಿರುವ ಪ್ರತಾಪ್‌ರೆಡ್ಡಿ, ಪ್ರಶಾಂತ್ ಕುಮಾರ್ ಠಾಕೂರ್ ಅವರ ನೇಮಕದ ಸಾಧ್ಯತೆ ಕಡಿಮೆ.
ಐವರು ಅಧಿಕಾರಿಗಳ ಸೇವಾ ಜೇಷ್ಠತೆ, ಕಾರ್ಯವೈಖರಿ, ಸೇವಾ ಅನುಭವ ಆಧರಿಸಿ ಒಬ್ಬರ ಹೆಸರನ್ನು ನೂತನ ಸರ್ಕಾರ ಅಂತಿಮಗೊಳಿಸಲಿದೆ.
ಅಲೋಕ್ ಮೋಹನ್ ಹಿನ್ನಲೆ:
,ಬಿಹಾರ ಮೂಲದ ಡಾ. ಅಲೋಕ್ ಮೋಹನ್, ೧೯೮೭ನೇ ಬ್ಯಾಚ್‌ನ ರಾಜ್ಯ ಕೇಡರ್ ಐಪಿಎಸ್ ಅಧಿಕಾರಿ. ೩೬ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಅವರು, ಹಾಲಿ ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳ ಡಿಜಿಪಿಯಾಗಿದ್ದಾರೆ.
ಈ ಹಿಂದೆ ಕಾರಾಗೃಹ ಇಲಾಖೆ ಡಿಜಿಪಿ, ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇವಾ ಜೇಷ್ಠತೆ ಆಧಾರದಲ್ಲಿ ಡಿಜಿ-ಐಜಿ ಹುದ್ದೆಯ ಮೊದಲ ಆಯ್ಕೆಯಾಗಿದ್ದಾರೆ. ಇನ್ನು ೨೦೨೫ರ ಏಪ್ರಿಲ್‌ನಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಡಾ.ಪಿ. ರವೀಂದ್ರನಾಥ್ ಹಿನ್ನೆಲೆ:
ಆಂಧ್ರ ಮೂಲದ ಡಾ.ಪಿ. ರವೀಂದ್ರನಾಥ್, ೧೯೯೦ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ೩೩ ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಲಿ ತರಬೇತಿ ವಿಭಾಗದ ಡಿಜಿಪಿಯಾಗಿದ್ದಾರೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದು, ಅಲೋಕ್ ಮೋಹನ್ ನಂತರದ ಸ್ಥಾನದಲ್ಲಿ ಡಿಜಿ-ಐಜಿ ಹುದ್ದೆಯ ರೇಸ್‌ನಲ್ಲಿದ್ದಾರೆ.
ಎಡಿಜಿಪಿ ತರಬೇತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬರುವ ಸೆಪ್ಟೆಂಬರ್ ಗೆ ನಿವೃತ್ತರಾಗುವ ಹಾಗೂ ಸೇವಾವಧಿಯಲ್ಲಿ ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿರುವ ರವೀಂದ್ರನಾಥ್ ಅವರನ್ನು ಡಿಜಿ-ಐಜಿಪಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಕಡಿಮೆ.
ಕಮಲ್ ಪಂತ್ ಗೆ ಒಲವು:
ಕಮಲ್ ಪಂಥ್ ಅವರು ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದು ಹಾಲಿ ತರಬೇತಿ ನೇಮಕಾತಿ ವಿಭಾಗದ ಡಿಜಿಪಿಯಾಗಿದ್ದಾರೆ.ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್‌ರೆಡ್ಡಿ ಕೂಡ ಡಿಜಿ-ಐಜಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
೨೦೨೦ರಲ್ಲಿ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಿ ಗುಪ್ತಚರ ಇಲಾಖೆ ಎಡಿಜಿಪಿಯಾಗಿದ್ದ ೧೯೯೦ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಕಮಲ್ ಪಂತ್ ಅವರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಸದ್ಯ ಕಮಲ್ ಪಂಥ್ ಎಡಿಜಿಪಿ ಸಿಐಡಿ ನೇಮಕಾತಿ ವಿಭಾಗದಲ್ಲಿದ್ದಾರೆ.
ಒಟ್ಟಿನಲ್ಲಿ ಈ ನಾಲ್ವರಲ್ಲಿ ಯಾರು ಕರ್ನಾಟಕ ಮಹಾ ಪೊಲೀಸ್ ನಿರ್ದೇಶಕರಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ವರದಿ ಆಂಥೋನಿ ಬೇಗೂರು