ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 1907 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದ್ದು, ಇಂತಹ ಮತಗಟ್ಟೆಗಳ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥ ಮಾಡಲಾಗಿದೆ.
ನಗರದ ಒಟ್ಟು 7916 ಮತಗಟ್ಟೆಗಳಲ್ಲಿ 1907 ಮತಗಟ್ಟೆಗಳು ಸೂಕ್ಷ ಮತಗಟ್ಟೆಗಳೆಂದು ಪರಿಗಣಿಸಿದ್ದರೆ, 6009 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಿ ಅಗತ್ಯಕ್ಕೆ ತಕ್ಕಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಒಟ್ಟು ಮತಗಟ್ಟೆ ಕೇಂದ್ರಗಳು 2509 ಇರಲಿದ್ದು, ಇದರಲ್ಲಿ 397 ಸೆಕ್ಟರ್ ಮೊಬೈಲ್, 103 ಸೂಪರ್‍ವೈಸರಿ ಹಾಗೂ 26 ಸಬ್ ಡಿವಿಷನ್ ಮೊಬೈಲ್ ಕೇಂದ್ರಗಳನ್ನಾಗಿ ವಿಂಗಡಿಸಲಾಗಿದೆ.
ಒಟ್ಟಾರೆ ನಗರದ 28 ಕ್ಷೇತ್ರಗಳಿಗೆ ನಡೆಯಲಿರುವ ಮತದಾನದಂದು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಗರ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ಹೋಂಗಾಡ್ರ್ಸ್ ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಮತದಾನದ ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ, ಇಬ್ಬರು ವಿಶೇಷ ಆಯುಕ್ತರು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 24 ಡಿಎಸ್ಪಿ, 67 ಎಸಿಪಿಗಳು, 248 ಇನ್ಸ್‍ಪೆಕ್ಟರ್‍ಗಳು, 881 ಪಿಎಸ್‍ಐಗಳು, 1020 ಎಎಸ್‍ಐಗಳು, 9971 ಕಾನ್ಸ್‍ಟೆಬಲ್‍ಗಳು, 2565 ಹೋಮ್‍ಗಾಡ್ರ್ಸ್‍ಗಳು ಹಾಗೂ 49 ಸಿಎಪಿಎಫ್ ಪೊಲೀಸರು ಭದ್ರತೆಗಾಗಿ ನಿಯೋಜಿಸಲಾಗಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನ್ಯಾಯ ಹಾಗೂ ಶಾಂತಿಯುತ ಮತದಾನಕ್ಕೆ ಬೆಂಗಳೂರು ನಗರ ಪೊಲೀಸ್ ಘಟಕ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ನಗರದ ಎಲ್ಲಾ ವಿಭಾಗಗಳ ವ್ಯಾಪ್ತಿಯಲ್ಲಿ ಕೇಂದ್ರಿಯ ಭದ್ರತಾ ಪಡೆಗಳೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಫಥಸಂಚಲನ ನಡೆಸುವ ಮೂಲಕ ಮತದಾರರ ಆತ್ಮಸ್ಥೆರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಎಂಟು ವಿಭಾಗಗಳಲ್ಲಿ 123 ಚೆಕ್‍ಪೋಸ್ಟ್‍ಗಳನ್ನು ಹಾಕಲಾಗಿದೆ. 131ಫ್ಲೈಯಿಂಗ್ ಸ್ಕ್ವಾಡ್‍ಗಳು ಕಾರ್ಯಚರಣೆ ನಡೆಸುತ್ತಿವೆ. ಇದರ ಜೊತೆಗೆ ಇಂದು ಸಂಜೆ 6 ರಿಂದ ಮೇ.10 ಮಧ್ಯರಾತ್ರಿವರೆಗೆ ನಗರದಲ್ಲಿ ಮದ್ಯಪಾನ ಮಾರಾಟ ನಿಧಿಷೇಸಲಾಗಿದೆ.
ನಗರದಲ್ಲಿರುವ 7483 ರೌಡಿಗಳಿಗೆ ಶಾಂತಿಭಂಗ ಉಂಟು ಮಾಡದಂತೆ ಎಚ್ಚರಿಕೆ ನೀಡುವುದರ ಜೊತೆಗೆ 28 ಜನರನ್ನು ಗೂಂಡಾ ಕಾಯಿದೆಯಡಿ ಬಂಧಿಸಲಾಗಿದೆ.
ನಗರದ 460 ಕಡೆಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಗಿದ್ದು, 7761 ಪರವಾನಿಗಿ ಪಡೆದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಇದರ ಜೊತೆಗೆ ವಿಶೇಷ ಕಾರ್ಯಚರಣೆ ಕೈಗೊಂಡು 4818 ವಾರೆಂಟ್‍ಗಳನ್ನು ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇದುವರೆಗೂ ನಗರ ಪೊಲೀಸರು 10 ಕೋಟಿ ರೂ.ಗಳಿಗೂ ಹೆಚ್ಚು ನಗದು, 28.5ಕೆ.ಜಿಯಷ್ಟು ಬಂಗಾರದ ವಡವೆಗಳು, 140 ಕೇಜಿ ಬೆಳ್ಳಿ ಆಭರಣಗಳು, 9 ಕೋಟಿಯಷ್ಟು ಉಚಿತ ಉಡುಗೊರೆಗಳು ಹಾಗೂ 29 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ಸೇರಿದಂತೆ 64 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ನಗರದಲ್ಲಿ ಮೇ.10 ರಂದು ಶಾಂತಿಯುತ ಮತದಾನಕ್ಕೆ ಪೊಲೀಸರು ಸಕಲ ಸಿದ್ದತೆ ಮಾಡಿಕೊಂಡಿದ್ದು, ಸಾರ್ವಜನಿಕರು ನಿರ್ಬೀತಿಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬಹುದು ಎಂದು ಪ್ರತಾಪ್‍ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.
Antony Raju A -Citizen Reporter-Karnataka