ವಾಣಿವಿಲಾಸ ಆಸ್ಪತ್ರೆಯಲ್ಲಿ ಎಂಟು ದಿನದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಕಳ್ಳಿಗಾಗಿ ವಿವಿಪುರಂ ಠಾಣೆ ಪೊಲೀಸರು ಬರೋಬ್ಬರಿ 600 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಕೊನೆಗೂ ಮಗುವನ್ನು ರಕ್ಷಿಸಿ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.
ರಾಮನಗರದ ರಶ್ಮಿ(30) ಬಂಧಿತ ಆರೋಪಿತೆ. ಮಕ್ಕಳಿಲ್ಲದ ಕಾರಣ ಮಗು ಅಪಹರಿಸಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಆರೋಪಿ ರಶ್ಮಿಗೆ ಮಕ್ಕಳಿಲ್ಲದ ಕಾರಣ ಒಂಟಿತನ ಕಾಡುತ್ತಿತಂತೆ. ಬೇರೆ ಮದುವೆಯಾಗಲು ಮನಸ್ಸು ಒಪ್ಪದಿದ್ದರಿಂದ ಆಗತಾನೆ ಹುಟ್ಟಿದ ಮಗುವನ್ನು ಅಪಹರಿಸಿದರೆ ತನ್ನದೇ ಮಗುವೆಂದು ಸಾಕಬಹುದೆಂದು ತಿಳಿದು ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಳು.
ಏ.15ರಂದು ವಾಣಿವಿಲಾಸ ಆಸ್ಪತ್ರೆಗೆ ಬಂದು ಎಲ್ಲ ವಾರ್ಡ್‍ಗಳನ್ನು ಈಕೆ ಮಗುವಿಗಾಗಿ ಹುಡುಕುತ್ತಿದ್ದಾಗ ವಾರ್ಡ್‍ವೊಂದರಲ್ಲಿ ಮಗು ಮಾತ್ರ ಇರುವುದು ಗಮನಿಸಿ ಅಪಹರಿಸಿದ್ದಾಳೆ. ಮಗುವನ್ನು ಸೀರೆಯಲ್ಲಿ ಸುತ್ತಿಕೊಂಡು ಆಟೋದಲ್ಲಿ ಸುತ್ತಾಡಿಕೊಂಡು ಗೊರಗುಂಟೆಪಾಳ್ಯ, ಬನಶಂಕರಿ ಹೀಗೆ ಅರ್ಧ ಬೆಂಗಳೂರು ನಗರ ಸುತ್ತಾಡಿ ಕೊನೆಗೆ ಬಸ್‍ನಲ್ಲಿ ರಾಮನಗರದ ತನ್ನ ಮನೆಗೆ ತೆರಳಿದ್ದಳು.
ಇತ್ತ ವಾಶರೂಮ್‍ಗೆ ಹೋಗಿದ್ದ ಮಗುವಿನ ತಾಯಿ ಸುಮಾ ವಾಪಸ್ ಬಂದು ನೋಡಿದಾಗ ಮಗು ಇರಲಿಲ್ಲ. ತಕ್ಷಣ ಗಾಬರಿಯಾಗಿ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿ ನಂತರ ಪತಿಗೆ ವಿಷಯ ತಿಳಿಸಿದ್ದರು.
ಮಗು ಕಾಣೆಯಾದ ಬಗ್ಗೆ ವಿವಿಪುರಂ ಠಾಣೆ ಪೊಲೀಸರಿಗೆ ತಂದೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಾಣಿವಿಲಾಸ ಆಸ್ಪತ್ರೆ ಸುತ್ತಮುತ್ತ, ಕೆ.ಆರ್.ರಸ್ತೆ, ಮೈಸೂರು ರಸ್ತೆ ಹಾಗೂ ಬನಶಂಕರಿ ನಂತರ ಇನ್ನಿತರ ರಸ್ತೆಗಳಲ್ಲಿರುವ ಸುಮಾರು 600ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬಳು ಮಗುವನ್ನು ಸೀರೆಯಲ್ಲಿ ಸುತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಈ ಆಧಾರದ ಮೇಲೆ ಪೊಲೀಸರು ಆರೋಪಿತೆಯನ್ನು ರಾಮನಗರದಲ್ಲಿ ಪತ್ತೆಹಚ್ಚಿ ಬಂಧಿಸಿ ಮಗುವನ್ನು ರಕ್ಷಿಸಿ ತಾಯಿಯ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಮೂಲದ ಸುಮಾ ಅವರು ಹೆರಿಗೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಾಗಿ ಕಳೆದ ಏ.7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಸಂದರ್ಭದಲ್ಲಿ ತಾಯಿಗೆ ಬಿಳಿ ರಕ್ತಕಣ ಕಡಿಮೆ ಇದ್ದ ಕಾರಣ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಏ.15ರಂದು ಬೆಳಗಿನಜಾವ ನಾಲ್ಕು ಗಂಟೆ ಸುಮಾರಿನಲ್ಲಿ ಮಗುವಿಗೆ ಹಾಲುಣಿಸಿ ವಾಶರೂಮ್‍ಗೆ ತೆರಳಿದ್ದಾಗ ಮಗು ಕಳ್ಳತನವಾಗಿತ್ತು. ಇದೀಗ ವಿವಿಪುರಂ ಠಾಣೆ ಪೊಲೀಸರು ಆರೋಪಿತೆಯನ್ನು ಬಂಧಿಸಿ ಮಗುವನ್ನು ರಕ್ಷಿಸಿ ತಾಯಿ ಮಡಿಲು ಸೇರಿಸಿದ್ದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.