ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ರಕ್ಷಣಾಧಿಕಾರಿಗಳಾಗಿ ಡಾ|| ಕೆ.ಧರಣಿ ದೇವಿ ಅವರು ಶನಿವಾರದಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು.
ಇಲ್ಲಿಯವರೆಗೆ ಕೆಜಿಎಫ್ ಎಸ್‌ಪಿ ಪ್ರಭಾರದಲ್ಲಿದ್ದ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್ ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಎಸ್ಪಿ ಡಾ|| ಕೆ.ಧರಣಿ ದೇವಿ ಅವರು ಈ ಹಿಂದೆ ಮೈಸೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿದ್ದರು. ಪ್ರಸ್ತುತ ಕೆಜಿಎಫ್ ಪೊಲೀಸ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಪ್ರಭಾರ ವಹಿಸಿಕೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಡಾ|| ಕೆ.ಧರಣಿ ದೇವಿ ಅವರು ಸಾಮಾನ್ಯ ನಾಗರೀಕರಿಗೆ ಅನ್ಯಾಯವಾಗದ ರೀತಿಯಲ್ಲಿ, ನಿಸ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು. ಜನಸಾಮಾನ್ಯರು ತಂತಮ್ಮ ಸಮಸ್ಯೆಗಳ ಕುರಿತು ತಮ್ಮನ್ನು ಯಾವುದೇ ಸಮಯದಲ್ಲೂ ಭೇಟಿಯಾಗಿ, ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದೆಂದರು.ಸಶಸ್ತ್ರ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಸೋಮಶೇಖರ ಮತ್ತು ಸಿಬ್ಬಂದಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಗೌರವ ರಕ್ಷೆ ನೀಡಿ, ಚಿನ್ನದ ನಗರಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮುರಳೀಧರ, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ ಮತ್ತು ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.