ದಿನಾಂಕ:05/08/2021 ರಂದು ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ಗ್ರಾಮದ ಕೆ.ಎಸ್.ಮಾಚಯ್ಯರವರ ಮನೆಯಲ್ಲಿ ಹಾಡುಹಗಲೇ ಕಳ್ಳತನ ಮಾಡಿದ್ದ ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.
ಅತ್ತೂರು ಗ್ರಾಮದ ನಿವಾಸಿ ಕೆ.ಎಸ್.ಮಾಚಯ್ಯ ರವರು ದಿನಾಂಕ:05/08/2021 ರಂದು ಬೆಳಿಗ್ಗೆ 09.00 ಗಂಟೆಗೆ ಮನೆಗೆ ಬೀಗಹಾಕಿಕೊಂಡು ಅಮ್ಮತ್ತಿಯಲ್ಲಿರುವ ತಮ್ಮ ಕಾಫಿ ತೋಟಕ್ಕೆ ಹೋಗಿದ್ದು, ಸಂಜೆ ಮನೆಗೆ ವಾಪಾಸ್ಸು ಬಂದು ನೋಡುವಾಗ್ಗೆ ಮನೆಯ ಹೆಂಚನ್ನು ತೆಗೆದು ಯಾರೋ ಕಳ್ಳರು ಒಳನುಗ್ಗಿ ಗಾಡ್ರೇಜ್ನಲ್ಲಿಟ್ಟಿದ್ದ 50 ಸಾವಿರ ನಗದು ಹಣ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ನೀಡಿದ ಪುಕಾರಿಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ.98/2021 ಕಲಂ:454, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಸಿಪಿಐ ಗೋಣಿಕೊಪ್ಪ ಮತ್ತು ಸಿಬ್ಬಂದಿಯವರ ತಂಡ ದಿನಾಂಕ:07/02/2022 ರಂದು 1). ಆನಂದ @ ಅಮ್ಮಿ @ ಮಮ್ಮಿ ತಂದೆ:ಪೌತಿ ಹನುಮಂತ, ಪ್ರಾಯ 37 ವರ್ಷ, ಗುಜರಿ ಆಯುವ ಕೆಲಸ, ಸ್ವಂತ ಊರು:ಗುಡ್ಡೇನಹಳ್ಳಿ, ಕೊಪ್ಪ, ಪಿರಿಯಾಪಟ್ಣ, ಹಾಲಿ ವಾಸ:ವಾಡಿಕ್ಕಲ್, ತಾಮರಶೇರಿ, ಕೇರಳ ರಾಜ್ಯ. 2). ಶಿವಕುಮಾರ್ @ ಚಂದ್ರಕುಮಾರ್ @ ಕುಮಾರ್ ತಂದೆ:ಚಿನ್ನಪ್ಪ ಗೌಡರ್, ಪ್ರಾಯ 38 ವರ್ಷ, ಕೂಲಿ ಕೆಲಸ, ಸ್ವಂತ ಊರು:ಪುಟಾಣಿನಗರ, ಮಡಿಕೇರಿ. ಹಾಲಿವಾಸ: ಪನಮರಂ, ವಯನಾಡು ಜಿಲ್ಲೆ, ಕೇರಳ ರಾಜ್ಯ. 3). ಗೋಪಾಲ ತಂದೆ:ಲೇಟ್ ಕೃಷ್ಣ, ಪ್ರಾಯ 48 ವರ್ಷ, ಗುಜರಿ ಕೆಲಸ, ಹುಣಸೆವಳ್ಳಿ, ಬಾರೆ,ಆಲೂರು ಗ್ರಾಮ, ಹಾಸನ ಜಿಲ್ಲೆ.
ಈ ಮೂವರು ಆರೋಪಿತರನ್ನು ಪತ್ತೆ ಹಚ್ಚಿ ಕಳುವಾದ 3 ಚಿನ್ನದ ನಾಣ್ಯಗಳು, ಒಂದು ಚಿನ್ನದ ಸರ, 6 ಬೆಳ್ಳಿಯ ನಾಣ್ಯಗಳು ಸೇರಿ ಒಟ್ಟು 16 ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿ ಹಾಗೂ ರೂ.1600/- ರೂ ನಗದು ಹಣ ಸೇರಿ ಒಟ್ಟು ರೂ.76600/- ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಪ್ರಕರಣವನ್ನು ವಿರಾಜಪೇಟೆ ಉಪವಿಭಾಗ ಡಿವೈ.ಎಸ್.ಪಿ ಸಿ.ಟಿ.ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್, ಎಎಸ್ಐ ಸುಬ್ರಮಣಿ, ಎಎಸ್ಐ ದೇವರಾಜು ಹಾಗೂ ಸಿಬ್ಬಂದಿಯವರಾದ ಹೆಚ್.ಕೆ.ಕೃಷ್ಣ, ಪಿ.ಎ.ಮಹಮದ್ ಅಲಿ, ಎಂ.ಡಿ.ಮನು, ಅಬ್ದುಲ್ ಮಜೀದ್, ಹರೀಶ, ಹೇಮಲತಾ ರೈ ಮತ್ತು ಚಾಲಕರಾದ ಬಷೀರ್ರವರು ಪತ್ತೆ ಮಾಡಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.