ಬೆಳಗಾವಿ: ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಬೆಳಗಾವಿಯಲ್ಲಿ ಕೆಲ ಪುಂಡರು ಇಂದು ನಸುಕಿನ ಜಾವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.
ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ 27 ಮಂದಿಯನ್ನು ಬಂಧಿಸಲಾಗಿದೆ. ಸರ್ಕಾರದ ಮತ್ತು ಬೆಳಗಾವಿಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸುಮಾರು 26 ವಾಹನಗಳನ್ನು ಪುಂಡರು ಧ್ವಂಸಗೊಳಿಸಿದ್ದರು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ ಕೆ ತ್ಯಾಗರಾಜನ್ ತಿಳಿಸಿದ್ದಾರೆ
ಸೆಕ್ಷನ್ 144 ಜಾರಿ: ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಇಂದು ಬೆಳಗ್ಗೆ 8 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಬೆಳಗಾವಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಸಹ ಆಯುಕ್ತರು ತಿಳಿಸಿದ್ದಾರೆ.
ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡ ಪೊಲೀಸರು: ಎಂಇಎಸ್ ಪುಂಡರ ಅಟ್ಟಹಾಸ ಮಿತಿಮೀರಿದ ಹಿನ್ನೆಲೆಯಲ್ಲಿ ನಗರದ ಮೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇಬಜಾರ್ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನೂರಾರು ಎಂಇಎಸ್ ಪುಂಡರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.