ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು, ನೀಡಿದ ದೂರಿನ ಮೇರೆಗೆ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಿಸಿಕೊಂಡ ಆರ್.ಟಿ.ನಗರ ಪೊಲೀಸರು ತನಿಖೆ ಆರಂಭಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 16.3 ಲಕ್ಷ ರೂ. ಬೆಲೆ ಬಾಳುವ 72.2 ಗ್ರಾಂ ತೂಕದ ಚಿನ್ನದ ಸರ ಹಾಗೂ ವಿವಿಧ ಕಂಪನಿಯ II ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿ, ಒಬ್ಬ ಆರೋಪಿಯು ಹಳೆ ಎಂ.ಓ. ಆಸಾಮಿಯಾಗಿದ್ದು, 2015 ನೇ ಸಾಲಿನಿಂದ ಬೆಂಗಳೂರು ನಗರದ 12 ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸಂಚು, ಸುಲಿಗೆ, ದ್ವಿಚಕ್ರವಾಹನ ಕಳವು ಸೇರಿದಂತೆ 12 ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಎರಡನೇ ಆರೋಪಿಯು ಸಹ ದರೋಡೆಗೆ ಸಂಚು, ಸುಲಿಗೆ, ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ ಹಾಗೂ ಮೂರನೇ ಆರೋಪಿಯು ಯಲಹಂಕ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಆರ್.ಟಿ.ನಗರ, ಜೆ.ಸಿ.ನಗರ, ಉಪ್ಪಾರಪೇಟೆ, ಕೆ.ಜಿ.ಹಳ್ಳಿ, ಮಲಕೇಶಿನಗರ, ಬಾಗಲೂರು, ಬಾಣಸವಾಡಿ, ಜೀವನ್ ಭೀಮಾನಗರ, ಹಲಸೂರು, ಹೈಗೌಂಡ್ಸ್ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು 11 ದ್ವಿಚಕ್ರವಾಹನ ಮತ್ತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣ ಸೇರಿದಂತೆ ಒಟ್ಟು 12 ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಪ್ರಕರಣದಲ್ಲಿ ಶ್ರೀ ಶಿವ ಪ್ರಕಾಶ್ ದೇವರಾಜು, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಮನೋಜ್ ಕುಮಾರ್, ಎಂ.ಈ. ಎಸಿಪಿ, ಜೆ.ಸಿ.ನಗರ ಉಪ ವಿಭಾಗ ಮತ್ತು ಶ್ರೀ ಹೆಚ್.ಆರ್. ಶಿವಕುಮಾರ್, ಪೊಲೀಸ್ ಇನ್ಸ್ಪೆಕ್ಟರ್, ಆರ್.ಟಿ.ನಗರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಯವರ ತಂಡ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ರವರು ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಎನ್.ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.