ರೈಸ್‍ಫುಲ್ಲಿಂಗ್ ಮಿಷನ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 2.88ಕೋಟಿ ರೂ. ಬೆಲೆಯ ಮೂರು ಕಾರುಗಳು, ಚಿನ್ನದ ಆಭರಣಗಳು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ನಟೇಶ್ ಅಲಿಯಾಸ್ ವೆಂಕಟರಮಣ (44), ವೆಂಕಟೇಶ್ (47) ಮತ್ತು ಸೋಮಶೇಖರ್ (47) ಬಂಧಿತ ಆರೋಪಿಗಳು.
ಬಂಧಿತರಿಂದ ರೈಸ್‍ಫುಲ್ಲಿಂಗ್ ಯಂತ್ರ, ಬೆಂಚ್ ಕಾರು, ಫಾರ್ಚೂನೊ ಕಾರು, ಸ್ಕಾರ್ಫಿಯೋ ಕಾರು, 28 ಲಕ್ಷ ಹಣ ಹಾಗೂ ಒಂದು ಕೆಜಿ 332 ಗ್ರಾಂ ಚಿನ್ನದ ಆಭರಣಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಸಾರ್ವಜನಿಕರಿಗೆ ತಮ್ಮ ಬಳಿ ಬೆಲೆ ಬಾಳುವ ರೈಸ್‍ಫುಲ್ಲಿಂಗ್ ಮಿಷನ್ ಇದ್ದು, ಅದು ಕೋಟ್ಯಂತರ ರೂ. ಬೆಲೆ ಬಾಳುವುದಾಗಿ ನಂಬಿಸಿದ್ದಾರೆ. ಅದನ್ನು ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಯಾವುದೇ ರೈಸ್‍ಫುಲ್ಲಿಂಗ್ ಮಿಷನ್ ಕೊಡದೆ ಮೋಸ ಮಾಡಿ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದುದ್ದು ವಿಚಾರಣೆಯಿಂದ ಗೊತ್ತಾಗಿದೆ.
ಇದೇ ರೀತಿ ಸಾರ್ವಜನಿಕರಿಗೆ ರೈಸ್‍ಫುಲ್ಲಿಂಗ್ ಹೆಸರಿನಲ್ಲಿ ವಂಚನೆ ಮಾಡಿರುವ ಸಂಬಂಧ ಆರೋಪಿ ನಟೇಶನ ವಿರುದ್ಧ ನಂಜನಗೂಡು ಹಾಗೂ ಕೋಣನಕುಂಟೆ, ಮಾದನಾಯಕನಹಳ್ಳಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ.
ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಂಟಿ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಉಪಪೊಲೀಸ್ ಆಯುಕ್ತ ಯತೀಶ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್, ಇನ್ಸ್‍ಪೆಕ್ಟರ್ ಚಂದ್ರಕಲಾ, ಹಜರೇಶ್ ಕಿಲ್ಲೇದಾರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯನ್ನು ಕೈಗೊಂಡು ವಂಚಕರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.