ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:10/09/2023 ರಂದು ಬೆಳಿಗ್ಗೆ ಸುಮಾರು 6-50 ಗಂಟೆಯಲ್ಲಿ ಪಿರ್ಯಾದಾರರಿಗೆ ಒಬ್ಬ ಅಪರಿಚಿತ ವ್ಯಕ್ತಿಯು ಕೆ.ಆರ್.ರಸ್ತೆ, ಕೋಟೆ ಆಂಜನೇಯ ಟೆಂಪಲ್ ಬಳಿ ಡಿಯೋ ಬೈಕ್ ನಲ್ಲಿ ಬಂದು ಇವರಿಗೆ ಚಾಕುವಿನಿಂದ ಹಲ್ಲೆ ಮಾಡಿ, ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದಾಗ ಅದೇ ಮಾರ್ಗವಾಗಿ ಬೀಟ್ , ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಪಿ.ಸಿ.20553 ಲಕ್ಷಣ ರಾಥೋಡ್ ರವರು ಈ ಕೃತ್ಯವನ್ನು ನೋಡಿ ಕೂಡಲೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿಯಲು ಹೋದಾಗ, ಆರೋಪಿ ಚಾಕುವನ್ನು ತೋರಿಸಿದರೂ ಸಹ ಎದೆಗುಂದದೆ, ಆರೋಪಿಯನ್ನು ಕೆಳಕ್ಕೆ ಕೆಡವಿ ಹಿಡಿದುಕೊಂಡಿರುತ್ತಾರೆ. ಆರೋಪಿಯು ಸಾರ್ವಜನಿಕರನ್ನು ಕೂಗಿ ಕರೆದು, ತಾನು ಅಮಾಯಕನೆಂದು, ಪೊಲೀಸರು ಸುಮ್ಮನೆ ತೊಂದರೆ ಕೊಡುತ್ತಿದ್ದಾರೆಂದು ಸಾರ್ವಜನಿಕರಿಗೆ ಬಿಂಬಿಸಲು ಪ್ರಯತ್ನಿಸಿದ್ದು, ಆಗ ಸಿಬ್ಬಂದಿಯವರಾದ ಹೆಚ್.ಸಿ.h863 ನಾಗೇಶ್ ರವರು ಸಹ ಸ್ಥಳಕ್ಕೆ ಬಂದಿದ್ದು, ಇಬ್ಬರೂ ಸೇರಿ ಸಾರ್ವಜನಿಕರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿ, ಆತನ ಬಳಿ ಇದ್ದ ಮೊಬೈಲ್‌ಗಳೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು, ಪಿರ್ಯದುದಾರರು. ನೀಡಿದ ದೂರಿನ ಮೇರೆಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಆತನಿಂದ ಒಟ್ಟು 6.80,000/-ಬೆಲೆ ಬಾಳುವ 40 ಮೊಬೈಲ್ ಫೋನ್‌ಗಳು ಮತ್ತು 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಮೊಬೈಲ್‌ಗಳಿಗೆ ಸಂಬಂಧಿಸಿದಂತೆ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ 02 ಸುಲಿಗೆ ಪ್ರಕರಣಗಳು ದಾಖಲಾಗಿರುತ್ತದೆ. ತನಿಖೆ ಮುಂದುವರೆದಿರುತ್ತದೆ.
ಈ ಕಾರ್ಯಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ,
ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಲಾಸಿಪಾಳ್ಯ ಠಾಣೆಯ
ಪೊಲೀಸ್ ಇನ್ಸಪೆಕ್ಟರ್ ಮತ್ತು ಸಿಬ್ಬಂದಿ ರವರು ಈ ಪತ್ತೆ ಕಾರ್ಯ ಕೈಗೊಂಡಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.