ಉಡುಪಿ: ಶಿರ್ವ, ಏಪ್ರಿಲ್ 21 ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಶಿರ್ವ ಸಂತ ಮೇರಿ ಸರ್ಕಲ್ ಬಳಿ ಕಾರು ಹಾಗೂ ಬೈಕ್ ಅಪಘಾತ. ಶಿರ್ವ ಪೇಟೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರಿಗೆ ಶಿರ್ವ ಪೇಟೆಯಿಂದ ವೇಗವಾಗಿ ಬಂದು ಸಂತಮೇರಿ ಸರ್ಕಲ್ ನ ಬಳಿ ಕಾರಿನ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯಶ್ ಪೂಜಾರಿ ರಸ್ತೆಗೆ ಅಪ್ಪಳಿಸಿದ್ದು ಸಹ ಸವಾರ ಕಾರಿನ ಮೇಲೆ ಬಿದ್ದು ಬಿದ್ದಿರುವ ದೃಶ್ಯವನ್ನು ಸ್ಥಳೀಯರು ಸ್ಮರಿಸುತ್ತಾರೆ. ತಕ್ಷಣ ಕಾರು ಚಾಲಕ ದಿನೇಶ್ ಶೆಟ್ಟಿ ಹಾಗೂ ಸ್ಥಳೀಯರು ಸೇರಿಕೊಂಡು ಗಾಯಾಳುಗಳನ್ನು ಶಿರ್ವ ಸಮುದಾಯ ಆಸ್ಪತ್ರೆಗೆ ಹೊರ ರೋಗಿಯಾಗಿ ದಾಖಲಿಸಿ ಬೈಕ್ ಸವಾರರಿಗೆ ಕೈ ಮೂಳೆ ಮುರಿತವಾಗಿದ್ದು ಮುಖಕ್ಕೆ ಹಾಗೂ ತಲೆಗೆ ಸ್ವಲ್ಪ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರ ಯಶ್ ಹಾಗೂ ಸಹಸವಾರ ವಿಜಯ್ ಪೂಜಾರಿ ಸ್ಥಳೀಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಘಟನೆ ಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದು ಕೂಡಲೇ ಶಿರ್ವ ಠಾಣಾಧಿಕಾರಿ ಮಂಜುನಾಥ್ ಮರಬದ ಇವರ ನೇತೃತ್ವದಲ್ಲಿ ಠಾಣಾ ಎಎಸ್ಐ ಸುರೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ತನಿಖೆಯನ್ನು ಮುಂದುವರಿಸುತ್ತಿದ್ದಾರೆ .
ಶಿರ್ವ ಹಾಗೂ ಆಸುಪಾಸಿನ ಪರಿಸರದಲ್ಲಿ ವಿದ್ಯಾರ್ಥಿಗಳು ಬೈಕ್ ಸವಾರರು ಅತೀ ವೇಗದಿಂದ ವಾಹನ ಚಾಲನೆಯನ್ನು ಮಾಡುತ್ತಿದ್ದು ಹಾಗೂ ಹೆಲ್ಮೆಟ್ ಧರಿಸದೆ ಅಪಘಾತಗಳ ತೀವ್ರತೆ ಹೆಚ್ಚುವುದರಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸ್ಥಳೀಯ ಸಂಘ ಸಂಸ್ಥೆಗಳು, ಹಾಗೂ ಸಾರ್ವಜನಿಕರು ಪೊಲೀಸರಿಗೆ ಆಗ್ರಹಿಸಿದ್ದಾರೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







