ಉಡುಪಿ: ಉಡುಪಿ ರೈಲು ನಿಲ್ದಾಣದಲ್ಲಿ ಒಂಟಿಯಾಗಿ ಪತ್ತೆಯಾದ ಪಶ್ಚಿಮ ಬಂಗಾಳದ 11 ವರ್ಷದ ಬಾಲಕನ ಹೆಸರು ಮತ್ತು ವಿಳಾಸದ ಬಗ್ಗೆ ಮಾಹಿತಿ ಇಲ್ಲದ ಕಾರಣ ಜನವರಿ 2026 ರಿಂದ ಉಡುಪಿಯ ಕುಂಜಿಬೆಟ್ಟು ಬಾಲಕರ ಗೃಹದ ವಶದಲ್ಲಿದ್ದಾನೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮೌಖಿಕ ಆದೇಶದ ಮೇರೆಗೆ, ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧೀಕ್ಷಕರು ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಗಂಗಾರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಸಹಕಾರದೊಂದಿಗೆ, ಕಾರ್ಕಳ ನಗರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಸಂಪ ಶೆಟ್ಟಿ ಅವರು ಬಾಲಕನ ತಾಯಿ ಸಾಧನಾ ಮಂಡಲ್ ಅವರು ಪ್ರಸ್ತುತ ಮಹಾರಾಷ್ಟ್ರದ ಕಲ್ಯಾಣ್ ಜಿಲ್ಲೆಯ ಟಿಟ್ವಾಲಾದಲ್ಲಿದ್ದಾರೆ ಎಂಬ ಮಾಹಿತಿಯನ್ನು ಪಡೆದು ಅವರನ್ನು ಸಂಪರ್ಕಿಸಿ ಬಾಲಕನ ಇರುವಿಕೆಯ ಬಗ್ಗೆ ಮಾಹಿತಿ ನೀಡಿದರು. ಬಾಲಕನ ಪೋಷಕರು ದಿನಾಂಕ 30/07/2026 ರಂದು ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗಿ, ಸೂಕ್ತ ದಾಖಲೆಗಳನ್ನು ನೀಡಿ, ಬಾಲಕನನ್ನು ತಮ್ಮೊಂದಿಗೆ ಕರೆದೊಯ್ದರು. ಕಾರ್ಕಳ ನಗರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಸಂಪ ಶೆಟ್ಟಿ ಅವರ ದಕ್ಷತೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಬಹಿರಂಗವಾಗಿ ಶ್ಲಾಘಿಸಿದ್ದಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







