ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ್ಯೂ ಜೈಸಾ ಟೆಕ್ನಾಲಜಿಸ್ ಪ್ರೈ.ಲಿ. ಎಂಬ ಕಂಪನಿಯೊಂದಿರುತ್ತದೆ. ಈ ಕಂಪನಿಯಲ್ಲಿ ಹಲವಾರು ದಿನಗಳಿಂದ ಲ್ಯಾಪ್ ಟಾಪ್ ಮತ್ತು ಕ್ರೋಮ್ ಬಾಕ್ಸ್‌ಗಳು ಕಳ್ಳತನವಾಗುತ್ತಿದ್ದು, ಈ ಕುರಿತು ಕಂಪನಿಯ ಮ್ಯಾನೇಜರ್ ರವರು ದಿನಾಂಕ:07/02/2024 ರಂದು ದೂರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನೀಡಿರುತ್ತಾರೆ.

ಪ್ರಕರಣವನ್ನು ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರು ತನಿಖೆ ಕೈಗೊಂಡು, ಒಟ್ಟು ಐದು ವ್ಯಕ್ತಿಗಳನ್ನು ದಿನಾಂಕ: 16/02/2024 ರಂದು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದವರ ಪೈಕಿ ಇಬ್ಬರು ವ್ಯಕ್ತಿಗಳು ಅದೇ ಕಂಪನಿಯಲ್ಲಿ ಲ್ಯಾಪ್‌ಟಾಪ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಉಳಿದ ಮೂರು ವ್ಯಕ್ತಿಗಳು ಇವರ ಸಹಚರರಾಗಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಗಳಿಂದ ಒಟ್ಟು 29 ವಿವಿಧ ಕಂಪನಿಯ ಲ್ಯಾಪ್ ಟಾಪ್‌ಗಳು ಮತ್ತು 59 ಕ್ರೋಮ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇವುಗಳ ಮೌಲ್ಯ 16,00,000/- ಲಕ್ಷ (ಹದಿನಾರು ಲಕ್ಷ ರೂಪಾಯಿ) ಗಳಾಗಿರುತ್ತವೆ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಶಿವಪ್ರಕಾಶ್ ದೇವರಾಜ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗಿರೀಶ್ .ಎಸ್.ಬಿ ರವರ ನೇತೃತ್ವದಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
