ಜೆ.ಪಿ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಶಾಖಂಬರಿ ನಗರನದ ಮನೆಯೊಂದರಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಮತ್ತು ಓಲೆಗಳನ್ನು ಕಿತ್ತುಕೊಂಡು ಹೋಗಿದ್ದರ ಬಗ್ಗೆ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಿದ್ದು, ದಿನಾಂಕ: 12/07/2023 ರಂದು ಆರೋಪಿತನನ್ನು ದಸ್ತಗಿರಿ ಮಾಡಲಾಗಿರುತ್ತದೆ, ಆರೋಪಿಯನ್ನು ಹೆಚ್ಚಿನ ವಿಚಾರಣೆ ಒಳಪಡಿಸಿದಾಗ ಆತನು ಜೆ.ಪಿ ನಗರ ಮತ್ತು ಜಯನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಮಾಡಿದ್ದ ತಲಾ ಒಂದು ಪ್ರಕರಣಗಳು ಸೇರಿದಂತೆ, ಆತನಿಂದ ಒಟ್ಟು 03 ಚಿನ್ನದ ಸರಗಳು, ಒಂದು ಜೊತೆ ಕಿವಿ ಓಲೆ, ಕೃತ್ಯಕ್ಕೆ ಬಳಸಿದ್ದ ಸುಜುಕಿ ಆಕ್ಸಿಸ್ ದ್ವಿಚಕ್ರ ವಾಹನ ಮತ್ತು ಚಾಕುವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,30,000/- ರೂಗಳಾಗಿರುತ್ತದೆ.
ಆರೋಪಿಯು ಈ ಹಿಂದೆ ಕುಮಾರಸ್ವಾಮಿ ಲೇಔಟ್, ಜಯನಗರ, ಕಬ್ಬನ್ ಪಾರ್ಕ್, ಸೇರಿದಂತೆ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಒಟ್ಟು 19 ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಡಪಟ್ಟಿರುತ್ತದೆ. ಸದರಿ ಆರೋಪಿ ಆಸಾಮಿಗೆ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಕೊಲೆಯತ್ನ ಪ್ರಕರಣದಲ್ಲಿ 05 ವರ್ಷ ಶಿಕ್ಷೆಯಾಗಿರುತ್ತದೆ. ಈತನು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ, ಬೆಂಗಳೂರು ನಗರ ಮತ್ತು ಬೆಳಗಾಂ ಜಿಲ್ಲಾ ಕಾರಾಗೃಹದಲ್ಲಿದ್ದು ನಂತರ ಬಿಡುಗಡೆಯಾಗಿರುತ್ತಾನೆ.
ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್, ಶ್ರೀ. ಪಿ.ಕೃಷ್ಣಕಾಂತ್, ಜಯನಗರ ಉಪವಿಭಾಗದ ಎ.ಸಿ.ಪಿ ಶ್ರೀ ಕೆ.ವಿ.ಶ್ರೀನಿವಾಸ್ ರವರುಗಳ ಮಾರ್ಗದರ್ಶನದಲ್ಲಿ ಜೆ.ಪಿ ನಗರ ಪೊಲೀಸ್ ಠಾಣೆಯ ಇನ್ಸ್ ಪಕ್ಟರ್ ಶ್ರೀ ಟಿ.ಎಸ್ ರಾಧಾಕೃಷ್ಣ ರವರ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರುಗಳು ಸದರಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯಾವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ, ದಯಾನಂದ ರವರು ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.