ಬೆಂಗಳೂರು :ಮೈಕೋ ಲೇಔಟ್ ಉಪವಿಭಾಗ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಸಭೆ ಆಯೋಜಿಸಲಾಯಿತು.ತಿಲಕ್ ನಗರ ,ಎಸ್ .ಜಿ. ಪಾಳ್ಯ ,ಬಿ.ಟಿ.ಎಂ. ಲೇಔಟ್ ಮತ್ತು ಬೊಮ್ಮನಹಳ್ಳಿ ದಿಂದ ಧಾರ್ಮಿಕ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಜುಲೈ 10 ರಂದು ಆಚರಿಸಲಿರುವ ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮವಾಗಿ ಗೋವು ಅಥವಾ ಒಂಟೆಗಳ ಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ರಾಜ್ಯ ಸರ್ಕಾರವು \’ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020ರ ಪ್ರಕಾರ ಅದೇಶ ಹೊರಡಿಸಿದೆ.ಮುಸ್ಲಿಂ ಬಾಂಧವರು ಭಾನುವಾರ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಿದ್ದಾರೆ ಎಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿದೆ. ಹಬ್ಬದ ದಿನದಂದು ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಧಾರ್ಮಿಕ ಆಚರಣೆಯ ಪ್ರಯುಕ್ತ ಹಬ್ಬದ ದಿನ ಸೇರಿದಂತೆ ಮೂರು ದಿನ ಖುರ್ಬಾನಿ ನೀಡುವ ಸಂಪ್ರದಾಯ ಇದೆ. ಹಬ್ಬವನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದೊಂದಿಗೆ ಆಚರಣೆ ಮಾಡಬೇಕು.
ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಶ್ರೀ.ಎಂ.ಎನ್.ಕರಿಬಸವನಗೌಡ ಎಸಿಪಿ, ಮೈಕೋ ಲೇಔಟ್ ಉಪವಿಭಾಗ (ಬೆಂಗಳೂರು) ಮನವಿ ಮಾಡಿದರು.
ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಅವರಣ, ಉದ್ಯಾನವನ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಖುರ್ಬಾನಿಯನ್ನು ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಪ್ರಾಣಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪೊಲೀಸ್ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ಸಾಮಾನ್ಯ ಮತ್ತು ಸ್ಥಳೀಯವಾಗಿ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು BBMP ಸೂಚಿಸಿದೆ.
ಸಭೆಯಲ್ಲಿ ಮೈಕೋ ಲೇಔಟ್ ಉಪವಿಭಾಗ ಎಸಿಪಿ ಶ್ರೀ.ಎಂ.ಎನ್.ಕರಿಬಸವನಗೌಡ ,ಮೈಕೋಲೇಔಟ್ ಠಾಣಾಧಿಕಾರಿ ಶ್ರೀ. ಚೌದ್ರಿ ,ಸುದ್ದಗುಂಟೆಪಾಳ್ಯ ಠಾಣಾಧಿಕಾರಿ ಶ್ರೀ .ಮಾರುತಿ ಜಿ ನಾಯಕ್ ,ಬೊಮ್ಮನಹಳ್ಳಿ ಠಾಣಾಧಿಕಾರಿ ಶ್ರೀ ಪ್ರಶಾಂತ್ ,ತಿಲಕ್ ನಗರ ಠಾಣಾಧಿಕಾರಿ ಶ್ರೀ .ಶಂಕರಾಚಾರ್ ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.