ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ವಿದೇಶಗಳಲ್ಲಿ ಇರುವಂತೆ ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ ಎಂಬ ಹೊಸ ಹುದ್ದೆಗಳನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೃಷ್ಟಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅಪರಾಧ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಅಲ್ಲಿ ಎಲ್ಲ ರೀತಿಯ ಸಾಕ್ಷ್ಯವನ್ನು ಸಂಗ್ರಹಿಸಿ ಅಪರಾಧಿಯನ್ನು ಪತ್ತೆ ಮಾಡುವಲ್ಲಿ ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ (scene of crime officer) ಪರಿಣಿತಿ ಹೊಂದಿರುತ್ತಾರೆ. ಮೊದಲ ಹಂತದಲ್ಲಿ 206 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.
ಈವರೆಗೆ ಸಾಕ್ಷ್ಯ ಸಂಗ್ರಹಿಸುವ ಕೆಲಸವನ್ನು ಸ್ಥಳೀಯ ಅಧಿಕಾರಿಗಳೇ ಮಾಡುತ್ತಿದ್ದರು. ಗಂಭೀರ ಸ್ವರೂಪದ ಅಪರಾಧಗಳಲ್ಲಿ ಇನ್ನು ಮುಂದೆ ಈ ತಂಡವೇ ಅಪರಾಧ ಕೃತ್ಯ ನಡೆದ ಸ್ಥಳಗಳಿಗೆ ಮೊದಲು ಭೇಟಿ ನೀಡಲಿದೆ. ಅಲ್ಲಿನ ಎಲ್ಲ ಸಾಕ್ಷಾಧಾರಗಳ ಸಂರಕ್ಷಣೆ, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು, ತನಿಖಾಧಿಕಾರಿಗೆ ಆ ಸಾಕ್ಷಾಧಾರಗಳನ್ನು ಒದಗಿಸುವುದು ಸೇರಿದಂತೆ ಇತರ ಅವಶ್ಯ ಕರ್ತವ್ಯಗಳನ್ನು ಮಾಡುತ್ತಾ ಅಪರಾಧಿಗಳನ್ನು ಅತ್ಯಂತ ಶ್ರೀಘ್ರದಲ್ಲಿ ಪತ್ತೆ ಮಾಡಲು ಮೂಲಭೂತವಾಗಿ ಬೇಕಾಗುವ ಎಲ್ಲ ಕೆಲಸ ಕಾರ್ಯಗಳನ್ನು ಈ ಅಧಿಕಾರಿಗಳು ಮಾಡುತ್ತಾರೆ’ ಎಂದು ವಿವರಿಸಿದರು.
ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಹಾಗೂ ಅಪರಾಧಿಗಳ ಪತ್ತೆಗಾಗಿಯೇ ಈ ರೀತಿಯ ಹುದ್ದೆಯನ್ನು ಸೃಷ್ಟಿಸಿರುವುದು ದೇಶದಲ್ಲೇ ಮೊದಲು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ ಹುದ್ದೆಗಳ ಆದೇಶ ಪ್ರತಿಯನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಮಾನ್ಯ ಗೃಹ ಸಚಿವರಾದ ಶ್ರೀ.ಬಸವರಾಜ ಬೊಮ್ಮಾಯಿ ರವರಿಂದು ಸಂಜೆ ಮೈಸೂರು ಜಿಲ್ಲೆ ಮತ್ತು ನಗರ ಪೊಲೀಸ್ ಘಟಕಗಳ ಕಾನೂನು –ಸುವ್ಯವಸ್ಥೆ ಮತ್ತು ಅಪರಾಧ ಪರಾಮರ್ಶನ ಸಭೆ ನಡೆಸಿದರು. ಮಾನ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರಾದ ಶ್ರೀ.ಪ್ರವೀಣ್ ಸೂದ್, ಐಪಿಎಸ್ ರವರು, ದಕ್ಷಿಣ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ. ಪ್ರವೀಣ್ ಮಧುಕರ್ ಪವಾರ್,ಐಪಿಎಸ್ ರವರು, ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಐಪಿಎಸ್ ರವರು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ.ಆರ್. ಶಿವಕುಮಾರ್ ರವರು ಹಾಗೂ ಜಿಲ್ಲಾ ಮತ್ತು ನಗರ ಘಟಕದ ಹಿರಿಯ ಕಿರಿಯ ಅಧಿಕಾರಿಗಳು ಹಾಜರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್