ಕೊಡಗು ಜಿಲ್ಲೆ ಹಾಗೂ ಹೊರ ಜಿಲ್ಲೆಯ ವ್ಯಕ್ತಿಗಳಿಗೆ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ ನಕಲಿ ನೇಮಕಾತಿ ಆದೇಶ ನೀಡಿ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಕುಖ್ಯಾತ ವ್ಯಕ್ತಿಯೊಬ್ಬನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊಡಗು ಜಿಲ್ಲೆಯ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಉಪ ನಿರೀಕ್ಷಕ ಹುದ್ದೆ ಕೊಡಿಸುವುದಾಗಿ ನಕಲಿ ನೇಮಕಾತಿ ಆದೇಶ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಡಿಕೇರಿ ನಗರದ ನಿವಾಸಿಯೊಬ್ಬರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಂತರ ಪ್ರಕರಣ ಸಿಐಡಿ ಬೆಂಗಳೂರು ಘಟಕಕ್ಕೆ ವರ್ಗಾವಣೆಯಾಗಿ ತನಿಖೆಯಲ್ಲಿತ್ತು. ಪ್ರಕರಣಕ್ಕೆ ಸಂಬಂಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಣಿಯೂರು ನಿವಾಸಿ ಪುನೀತ್ ಕುಮಾರ್ ಮತ್ತು ಮೈಸೂರಿನ ಜ್ಯೋತಿನಗರದ ಗಾಯಿತ್ರಿಪುರದ ನಿವಾಸಿ ಅರುಣ್ ಕುಮಾರ್ ಯಾನೆ ಮಾರ ಎಂಬಿಬ್ಬರು ಆರೋಪಿಗಳನ್ನು ಕೊಡಗು ಡಿಸಿಬಿಐ ಘಟಕದ ಪೊಲೀಸರು ಪತ್ತೆಹಚ್ಚಿ ಪ್ರಕರಣದ ತನಿಖೆಯ ಬಗ್ಗೆ ಜಿಲ್ಲೆಗೆ ಬಂದ ಸಿಐಡಿ ಘಟಕದ ಡಿವೈಎಸ್ಪಿ ಅಬ್ದುಲ್ ಕರೀಂ ರಾವ್ ತರ್ ರವರ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ಸಮಯದಲ್ಲಿ ಈ ಆರೋಪಿಗಳು ಜಿಲ್ಲೆ ಹಾಗೂ ಹೊರ ಜಿಲ್ಲೆಯ ವ್ಯಕ್ತಿಗಳಿಂದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ ನಕಲಿ ನೇಮಕಾತಿ ಆದೇಶ ನೀಡಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಪುನಿತ್ ಕುಮಾರ್ ನಿಂದ 5.50 ಲಕ್ಷ ನಗದು ಹಣ ಹಾಗೂ ಸುಮಾರು 03 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ ಆರೋಪಿಗಳ ಸಂಪರ್ಕದಂತೆ ಕಳೆದ 15 ದಿನಗಳ ಹಿಂದೆ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರ ಹುದ್ದೆ ಕೊಡಿಸುವುದಾಗಿ ನಕಲಿ ನೇಮಕಾತಿ ಆದೇಶ ನೀಡಿ ಲಕ್ಷಾಂತರ ಹಣ ಪಡೆದು ವಂಚಿಸಿರುವ ಇಲ್ಲಿನ ಸ್ಥಳೀಯ ಆರೋಪಿಗಳಾದ ಶಭರೀಶ್ , ರಾಜಮಣಿ ಮತ್ತು ಚಂದ್ರ ಶೇಖರ್ ಎಂಬವರುಗಳನ್ನು ಡಿಸಿಐಬಿ ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದು.
ಕಾರ್ಯಾಚರಣೆಯಲ್ಲಿ ಸಿಐಡಿ ಡಿವೈಎಸ್ಪಿ ಅಬ್ದುಲ್ ಕರೀಂ ರಾವ್ ತರ್, ಜಿಲ್ಲಾ ಗುಪ್ತ ದಳದ ಪಿಐ ಐ.ಪಿ ಮೇದಪ್ಪ, ಡಿಸಿಐಬಿ ಘಟಕದ ಎಎಸ್ಐ ಹಮೀದ್ ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್,ವಸಂತ, ವೆಂಕಟೇಶ್, ಶರತ್ ರೈ, ಸುರೇಶ್, ಅನಿಲ್ ಕುಮಾರ್ ಮತ್ತು ಸಿಡಿಆರ್ ಘಟಕದ ರಾಜೇಶ್ ಮತ್ತು ಗಿರೀಶ್ ರವರು ಭಾಗವಹಿಸಿದ್ದು ಇವರ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,