ದಿನಾಂಕ: 03-10-2023.
ನಕಲಿ ಕೀ ಗಳನ್ನು ಬಳಸಿ ಮನೆ ಬಾಗಿಲು ತೆಗೆದು ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ.
ತಿಲಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದ ಪಿರ್ಯಾದುದಾರರು ದಿ:23.09.2023 ರಂದು ಕುಟುಂಬ ಸಮೇತ ತಮ್ಮ ಸಂಬಂಧಿಕರ ಮದುವೆಯ ನಿಮಿತ್ತ ರಾಮನಗರಕ್ಕೆ ಹೋಗಿದ್ದು ನಂತರ ದಿನಾಂಕ 25.09.2023 ರಂದು ಮದ್ಯ ರಾತ್ರಿ ಸುಮಾರು 01-00 ಗಂಟೆಗೆ ವಾಪಸ್ಸು ಮನೆಗೆ ಬಂದು ನೋಡಲಾಗಿ ಬೀರುವಿನಲ್ಲಿ ಇಟ್ಟಿದ ಸುಮಾರು 2.5 ಕೆ.ಜಿ ಚಿನ್ನಾಭರಣಗಳು ಮತ್ತು 8 ರಿಂದ 10 ಲಕ್ಷ ರೂ. ನಗದು ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ.
ಕಾರ್ಯ ಪ್ರವೃತ್ತರಾದ ಪೊಲೀಸರು ಒಂದು ವಿಶೇಷ ತಂಡವನ್ನು ರಚಿಸಿ, ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ನಕಲಿ ಕೀಗಳನ್ನು ಬಳಸಿ ಮನೆ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ಆತನಿಂದ ರೂ 1,10,60,000/-ರೂ. ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾಭರಣಗಳು, 74,000/- ರೂ. ನಗದು ಹಣ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿರುತ್ತದೆ. ಆರೋಪಿ ತಾನು ಕದ್ದ ನಗದು ಹಣದಲ್ಲಿ ಬಹುಪಾಲು ಹಣವನ್ನು ಮಾಡಿದ್ದ ಸಾಲವನ್ನು ತೀರಿಸಲು ಬಳಸಿಕೊಂಡಿರುತ್ತಾನೆಂದು ತಿಳಿಸಿರುತ್ತಾನೆ.
ಈ ಉತ್ತಮ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಮಾನ್ಯ ಅಪರ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ ರವರು ಪ್ರಶಂಶಿಸಿರುತ್ತಾರೆ.