ಕರ್ತವ್ಯ ನಿರತ ಪೊಲೀಸ್ ಪೇದೆಯ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆಗೈದು ಕೊಲೆಯತ್ನ ನಡೆಸಿದ ಇಬ್ಬರು ಆರೋಪಿಗಳನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಪಿ.ರಾಜೇಶ್ ಮತ್ತು ಕೆ.ಸಚಿನ್ಸುಧಾಕರ್ ಅವರುಗಳನ್ನು ಕೃತ ವೆಸಗಿದ ೨೪ ಗಂಟೆಗಳಲ್ಲಿಯೇ ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ. ೮ ರಂದು ಆಂಡ್ರಸನ್ಪೇಟೆಯ ಚಾಮರಾಜಪೇಟೆಯ ವೃತ್ತದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಕರ್ತವ್ಯದಲ್ಲಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ತಿರುಗಾಡುತ್ತಿದ್ದವರನ್ನು ತಡೆದು ವಿಚಾರಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಒಬ್ಬ ದ್ವಿಚಕ್ರ ವಾಹನದ ಸವಾರನ ಜೊತೆ ಮಾತಿನ ಚಕಮತಿ ನಡೆದು ನಂತರ ಹೊರಟು ಹೋಗಿದ್ದು, ಆನಂತರ ಮದ್ಯಾಹ್ನ ಸುಮಾರು ೧೨.೪೦ ಗಂಟೆಗೆ ಪಿಸಿ ಅಶೋಕ್ ಚಾಮರಾಜಪೇಟೆ ವೃತ್ತದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿಗಳು ಆಂಡ್ರಸನ್ಪೇಟೆ ಕಡೆಯಿಂದ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದು ಏಕಾಏಕೀ ಒಂದು ಕಲ್ಲಿನಿಂದ ಪಿಸಿ ಅಶೋಕ್ ತಲೆಗೆ ಹೊಡೆದ ಪರಿಣಾಮ ಅಶೋಕ್ಗೆ ರಕ್ತಗಾಯವಾಗಿದ್ದು, ಆರೋಪಿಗಳು ವೇಗವಾಗಿ ದ್ವಿಚಕ್ರವಾಹನದಲ್ಲಿ ಪರಾರಿಯಾಗಿರುತ್ತಾರೆ. ಈ ಸಂಬಂಧ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಅಧೀಕ್ಷಕರು, ಇವರ ಮಾರ್ಗದರ್ಶನದಲ್ಲಿ ವಿಶೇಷ ಅಪರಾಧ ತಂಡವನ್ನು ರಚಿಸಿದ್ದು, ಪೊಲೀಸರು ಆರೋಪಿಗಳಾದ ಎಫ್.ಬ್ಲಾಕ್ನ ನಿವಾಸಿ ರಾಜೇಶ್ (೩೮), ಮಾರಿಕುಪ್ಪಂ ಸಾಮಿಲ್ ಲೈನಿನ ನಿವಾಸಿ ಸಚಿನ್ಸುಧಾಕರ್ (೨೫) ರವರನ್ನು ಮೇ. ೯ ರ ಬೆಳಿಗ್ಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಪಲ್ಸರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್