ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿ ಕ್ರಾಸ್ ಬಳಿ, ದಿನಾಂಕ:07.07.2023 ರಂದು ಸಂಜೆ ಪಾನ್ ಮಸಾಲ ಐಟಂಗಳನ್ನು ಮಾರುವ 03 ಜನರು ಅವರಿಗೆ ಸೇರಿದ ಅಶೋಕ್ ಲೈಲ್ಯಾಂಡ್ ದೋಸ್ತ್ ಗೂಡ್ಸ್ ಗಾಡಿಯಲ್ಲಿ ತೆರಳಿ, ಅಂಗಡಿಗೆ ಡೆಲಿವರಿ ನೀಡುವ ಸಮಯದಲ್ಲಿ, ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ಆಸಾಮಿಗಳು ಡೆಲಿವರಿ ಮಾಡುತ್ತಿದ್ದ 03 ಜನ ವ್ಯಕ್ತಿಗಳಿಗೆ ಚಾಕುವನ್ನು ತೋರಿಸಿ, ಬೆದರಿಸಿ, ಅವರ ಬಳಿಯಿದ್ದ ರೂ. 4,00,000/– ಹಣವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿರುತ್ತಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರಿಸಿದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯವರು, ದಿನಾಂಕ: 11-07- 2023 ರಂದು ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿ, ಆರೋಪಿಗಳಿಂದ 4,00,000/- ರೂ ನಗದು ಹಣವನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ಮತ್ತು ಒಂದು ಮಚ್ಚನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿರುತ್ತಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮಣ್ ನಿಂಬರ್ಗಿ ಐ.ಪಿ.ಎಸ್. ರವರ ಸೂಕ್ತ ಮಾರ್ಗದರ್ಶನದಲ್ಲಿ ವಿಜಯನಗರ ಉಪ- ವಿಭಾಗದ ಸಹಾಯಕ ಪೊಲೀಸ್ ಕಮಿಷನರ್‌ರವರಾದ ಶ್ರೀ. ಪಿ.ರವಿ ರವರ ನಿರ್ದೇಶನದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ , ಲೋಹಿತ್, ಬಿ.ಎನ್. ರವರ ಹಾಗೂ ಸಿಬ್ಬಂದಿರವರುಗಳು ಈ ಕಾರ್ಯಾಚರಣೆಯನ್ನು ಕೈಗೊಂಡು ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ
ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ
ಶ್ರೀ. ಸತೀಶ್ ಕುಮಾರ್ ರವರು ಪ್ರಶಂಸಿರುತ್ತಾರೆ.