ಬೆಂಗಳೂರು: ಪ್ರತಿಷ್ಠಿತ ಇಂಡಿಯಾ ಸೈಬರ್ ಕಾಪ್ ಆಫ್ ದಿ ಇಯರ್ -2021 ಪ್ರಶಸ್ತಿಗೆ ಸಿಐಡಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಕೆ.ಎನ್.ಯಶವಂತಕುಮಾರ್ ಭಾಜನರಾಗಿದ್ದಾರೆ.
ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಅಸಾಧಾರಣ ತನಿಖಾ ಕರ್ತವ್ಯವನ್ನು ನಿರ್ವಹಿಸಿ, ಪ್ರಕರಣವನ್ನು ಭೇದಿಸಿದ ಅಧಿಕಾರಿಗಳನ್ನು ಗುರುತಿಸುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪ್ರಚೋದನೆಗೊಳಡಿಸಿ, ಲೈಂಗಿಕ ಸ್ವರೂಪದ ಚಟುವಟಿಕೆಯಲ್ಲಿ ತೊಡಗಿಸಿದ ದೃಶ್ಯಗಳನ್ನು ತಮ್ಮ ವಶದಲ್ಲಿಟ್ಟುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ವಾಣಿಜ್ಯ ವ್ಯವಹಾರದಲ್ಲಿ ತೊಡಗಿಸಿಕೊಂಡ ಪ್ರಕರಣವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ತನಿಖಾ ವಿಧಾನದಲ್ಲಿ ಭೇದಿಸಿದಕ್ಕಾಗಿ ಕೆ.ಎನ್.ಯಶವಂತಕುಮಾರ್ \’ಸೈಬರ್ ಕಾಪ್ ಆಫ್ ದಿ ಇಯರ್ 2021\’ ಪ್ರಶಸ್ತಿ ಪಡೆದಿದ್ದಾರೆ.
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೆಷನ್ ಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿ, ಐಎಎಸ್ ಅಧಿಕಾರಿಯಾದ ಅಜಯ್ ಪ್ರಕಾಶ್ ಸಾಹನಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ದೇಶದ ವಿವಿಧ ರಾಜ್ಯಗಳ 55ಕ್ಕೂ ಅಧಿಕ ಅತ್ಯುನ್ನತ ಮಟ್ಟದ ತನಿಖೆಯ ಪ್ರಕರಣಗಳು ಸ್ಪರ್ಧೆಯಲ್ಲಿದ್ದವು. ಅವುಗಳ ಪೈಕಿ ಉತ್ತರಾಖಂಡ್, ಆಂಧ್ರಪ್ರದೇಶ, ಕರ್ನಾಟಕದ ಪ್ರಕರಣಗಳು ಕೊನೆ ಸುತ್ತಿನಲ್ಲಿ ಆಯ್ಕೆ ಆಗಿದ್ದವು.