ಕೊಡಗು ಜಿಲ್ಲೆ ವಿರಾಜಪೇಟೆ ತಾಲೊಕು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಕೂರು ಹೊಸ್ಕೇರಿ ಗ್ರಾಮದ ಕೂತಂಡ ಸುಬ್ಬಯ್ಯರವರ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ನಗರ ವೃತ್ತ ಮತ್ತು ಡಿಸಿಆರ್‌ಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ. ದಿನಾಂಕ: 12-06-2022 ರಂದು ವಿರಾಜಪೇಟೆ ತಾಲ್ಲೂಕು ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿ ಸುಬ್ಬಯ್ಯ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮುಂಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ ಮನೆಯೊಳಗೆ ಪೆಟ್ಟಿಗೆಯಲ್ಲಿ ಇಟ್ಟಿದ್ದ ಒಟ್ಟು ಅಂದಾಜು ₹. 9 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಡಿಕೇರಿ ನಗರ ವೃತ್ತ ನಿರೀಕ್ಷಕರು ಮತ್ತು ಡಿ.ಸಿ.ಆರ್.ಬಿ ವಿಭಾಗದ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದರು.
ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಭಾಗಿಯಾಗಿದ್ದು 1). ಕುರ್ಬನ್ ಆಲಿ, ತಂದೆ ಹುಸೈನ್, ಪ್ರಾಯ 2೦ ವರ್ಷ, ಕೂಲಿಕೆಲಸ, ಸ್ವಂತ ವಿಳಾಸ, ನದಿರ್‌ಕಾಸ್, ಬೆಚಿಮರಿ, ಧರಂಗ್, ಆಸ್ಸಾಂ ರಾಜ್ಯ. ಹಾಲಿ ವಾಸ ದುಬಾರೆ ಚೆಟ್ಟಿನಾಡು , ಪ್ಲಾಂಟೇಶನ್, ಮೇಕೂರು ಹೊಸ್ಕೇರಿ ಗ್ರಾಮ. 2). ಮಹಿರುದ್ದೀನ್ ಆಲಿ, ತಂದೆ ಲೇಟ್ ಅಬ್ದುಲ್ ಬರೆಕ ಆಲಿ, ಪ್ರಾಯ 28 ವರ್ಷ, ಕೂಲಿಕೆಲಸ, ಸ್ವಂತ ವಿಳಾಸ, ಬಾರೋಪಾರಾ ಗ್ರಾಮ, ಖಾರುಪೇಟೆಯಾ ಅಂಚೆ, ದೊಂಗ ಜಿಲ್ಲೆ, ಆಸ್ಸಾಂ ರಾಜ್ಯ ಹಾಲಿ ವಾಸ ದುಬಾರೆ ಚೆಟ್ಟಿನಾಡು , ಪ್ಲಾಂಟೇಶನ್, ಮೇಕೂರು ಹೊಸ್ಕೇರಿ ಗ್ರಾಮ. ಎಂಬುವವರನ್ನು ಬಂಧಿಸಲಾಗಿದೆ. ಆಸ್ಸಾಂ ರಾಜ್ಯದ ಸಫಿಕೂಲ್ ಇಸ್ಲಾಂ @ ಬಾಬು, ಮತ್ತು ಮೊಹಿಬುಲ್ ಇಸ್ಲಾಂ, ಎಂಬುವವರು ತಲೆಮರೆಸಿಕೊಂಡಿರುತ್ತಾರೆ.
ಬಂಧಿತರಿಂದ ಒಟ್ಟು ₹. 11,70,000 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಕ್ಯಾ. ಎಂ.ಎ ಅಯ್ಯಪ್ಪ ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗ ಡಿ.ವೈ.ಎಸ್.ಪಿ ಗಜೇಂದ್ರಪ್ರಸಾದ್ ಕೆ.ಎಸ್.ಪಿ.ಎಸ್ ಇವರ ನೇತೃತ್ವದ ಮಡಿಕೇರಿ ವೃತ್ತ ಸಿ.ಪಿ.ಐ ವೆಂಕಟೇಶ್ ಪಿ.ವಿ, ಡಿ.ಸಿ.ಆರ್.ಬಿ ವಿಭಾಗದ ಪಿ.ಐ ನಾಗೇಶ್ ಕದ್ರಿ, ಸಿದ್ದಾಪುರ ಠಾಣೆ ಪಿ.ಎಸ್.ಐ ಮೋಹನ್ ರಾಜ್, ಪ್ರೊ.ಪಿಎಸ್‌ಐ ಪ್ರಮೋದ್, ಎ.ಎಸ್.ಐ ರವರಾದ ತಮ್ಮಯ್ಯ ಎನ್.ಟಿ, ದೇವಯ್ಯ ಬಿ.ಸಿ ಸಿಬ್ಬಂದಿಯವರಾದ ಯೋಗೇಶ್ ಕುಮಾರ್, ನಿರಂಜನ್, ಸುರೇಶ್, ವಸಂತ್, ಅನಿಲ್ ಕುಮಾರ್, ವೆಂಕಟೇಶ್, ಶರತ್, ಶಶಿಕುಮಾರ್, ಕಿರಣ್, ಚರ್ಮಣ, ದೇವರಾಜು, ದಿನೇಶ್, ನಾಗರಾಜ್ ಕೆ, ರತನ್, ಲಕ್ಷ್ಮಿಕಾಂತ್, ವಸಂತ್ ಕುಮಾರ್, ಮಲ್ಲಪ್ಪ ಎಂ, ಗೋವರ್ಧನ್, ತಮ್ಮಯ್ಯ, ಶಿವಪ್ಪ, ರಾಜೇಶ್, ಗಿರೀಶ್, ಪ್ರವೀಣ್‌ಕುಮಾರ್ ರವರನ್ನೊಳಗೊಂಡ ತಂಡ ಭಾಗವಹಿಸಿದ್ದರು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ. ಸೂಚನೆ:- ಕೊಡಗು ಜಿಲ್ಲೆಯಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಹೆಚ್ಚಿನ ಅಪರಾಧಗಳಲ್ಲಿ ಹೊರ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರು ಭಾಗಿಯಾಗಿರುವುದು ಕಂಡು ಬರುತ್ತದೆ.
ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವಾಗ ತೋಟದ ಮಾಲೀಕರು ಕಡ್ಡಾಯವಾಗಿ ಕಾರ್ಮಿಕರ ಅಪರಾದ ಹಿನ್ನಲೆಯನ್ನು ಪರಿಶೀಲಿಸಿಕೊಂಡು ಅವರಿಂದ ನೈಜ ದಾಖಲಾತಿಗಳನ್ನು (ಗುರುತಿನ ಚೀಟಿಯನ್ನು) ಪರಿಶೀಲಿಸಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಹಾಗೂ ಕಾರ್ಮಿಕರ ಇತ್ತ್ತೀಚಿನ ಭಾವಚಿತ್ರವನ್ನು ಹೊಂದಿಕೊಳ್ಳುವುದು. ಹಾಗೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕೆಲಸಕ್ಕೆ ನೇಮಿಸಿಕೊಂಡ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಸಾರ್ವಜನಿಕರಿಗೆ ಈ ಮೂಲಕ ತಿಳಿಯ ಪಡಿಸುತ್ತೇವೆ.