ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ 03 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ದಿನಾಂಕ:04.06.2024 ರಂದು ನಡೆಯಲಿದ್ದು, ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ನಡೆಸಲು ಈ ಕೆಳಕಂಡಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
- ಮತ ಎಣಿಕೆ ಕೇಂದ್ರಗಳ ವಿವರ:
- ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ, ಬೆಂಗಳೂರು (ಬೆಂಗಳೂರು ಕೇಂದ್ರ ಕ್ಷೇತ್ರ)
- ಸೆಂಟ್.ಜೋಸೆಫ್ ಇಂಡಿಯನ್ ಹೈಸ್ಕೂಲ್. ವಿಠಲ್ ಮಲ್ಯ ರಸ್ತೆ, ಬೆಂಗಳೂರು (ಬೆಂಗಳೂರು ಉತ್ತರ ಕ್ಷೇತ್ರ)
- ಎಸ್.ಎಸ್.ಎಂ.ಆರ್.ವಿ ಕಾಲೇಜು,
- 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು (ಬೆಂಗಳೂರು ದಕ್ಷಿಣ ಕ್ಷೇತ್ರ)
ಬೆಂಗಳೂರು ನಗರ ಪೊಲೀಸ್ ಘಟಕದಿಂದ ಲೋಕಸಭೆ ಚುನಾವಣೆ-2024 ರ ಮತ ಎಣಿಕೆ ದಿನ ಬಂದೋಬಸ್ತ್ ಕರ್ತವ್ಯಕ್ಕೆ ಒಟ್ಟು 1524 ಅಧಿಕಾರಿ/ಸಿಬ್ಬಂದಿಗಳು, 13 ಸಶಸ್ತ್ರ ತುಕಡಿಗಳು ಹಾಗೂ 04 ಕ್ಯೂಆರ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ. ಹಾಗೂ ಈಗಾಗಲೇ 516 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು (ಸಿವಿಲ್ ಮತ್ತು ಸಿಎಆರ್ ಒಳಗೊಂಡಂತೆ) ಮತ್ತು 1 ಸಿಎಪಿಎಫ್ ತುಕಡಿ (92 ಜನ) ಮೂರು ಪಾಳಿಯಲ್ಲಿ ಸ್ಟಾಂಗ್ ರೂಂ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಮತ ಎಣಿಕೆ ಕೇಂದ್ರದ ಸುತ್ತ ಮುತ್ತಲೂ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ 400 ಕ್ಕೂ ಹೆಚ್ಚು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಲೋಕಸಭಾ ಚುನಾವಣೆ-2024 ರ ಮತ ಎಣಿಕೆ ಸಂಬಂಧ ನಗರದ ಒಟ್ಟು 2400 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮತ ಎಣಿಕೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಲೋಕಸಭಾ ಚುನಾವಣೆ-2024 ರ ಮತ ಎಣಿಕೆ ಸಂಬಂಧ ದಿನಾಂಕ: 03-06-2024 ರ ಮಧ್ಯರಾತ್ರಿ 12-00 ಗಂಟೆಯಿಂದ ದಿನಾಂಕ: 04-06-2024 ರ ಮಧ್ಯರಾತ್ರಿ 12-00 ಗಂಟೆಯವರೆಗೆ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇದಿಸಲಾಗಿದೆ.
ಲೋಕಸಭಾ ಚುನಾವಣೆ-2024 ರ ಮತ ಎಣಿಕೆ ಸಂಬಂಧ ದಿನಾಂಕ:04-06-2024 ರಂದು ಬೆಳಿಗ್ಗೆ 06-00 ಗಂಟೆಯಿಂದ ದಿನಾಂಕ: 04-06-2024 ರಂದು ಮಧ್ಯರಾತ್ರಿ 12-00 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ 1973 ರ ಕಲಂ 144 ರನ್ವಯ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುತ್ತದೆ. ಯಾವುದೇ ರೀತಿಯ ಗುಂಪು ಸೇರುವುದು, ವಿಜಯೋತ್ಸವ ಮೆರವಣಿಗೆ ಹಾಗೂ ಸಭೆ ಸಮಾರಂಭ ಜರುಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಲೋಕಸಭಾ ಚುನಾವಣೆ-2024 ರ ಮತ ಎಣಿಕೆ ಕೇಂದ್ರಗಳ ಬಳಿಯ ಬಂದೋಬಸ್ತ್ ವ್ಯವಸ್ಥೆ ಜೊತೆಗೆ ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಸಹ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿರುತ್ತದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಕೆ.ಎಸ್.ಆರ್.ಪಿ. ಸಿ.ಎ.ಆರ್ ತುಕಡಿಗಳನ್ನೂ ಸಹ ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿದೆ.