ಸೋಲದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಪಿರ್ಯಾದುದಾರರು ದಿನಾಂಕ 21-11-2023 ರಂದು ಸಂಜೆ ಕೆಲಸ ಮುಗಿಸಿಕೊಂಡು ಕೆಂಪಾಪುರ ಪೈಪ್‌ಲೈನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಯಾರೋ ಅಪರಿಚಿತರಿಬ್ಬರು ದ್ವಿಚಕ್ರವಾಹನದಲ್ಲಿ ಹಿಂಬದಿಯಿಂದ ವಿಳಾಸ ಕೇಳುವ ನೆಪದಲ್ಲಿ ಬಂದು ಏಕಾಏಕಿ ಪಿರ್ಯಾದಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೂರು ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದು, ಅವರುಗಳು ನೀಡಿದ ಮಾಹಿತಿ ಮೇರೆಗೆ ಸುಮಾರು ₹ 3.7 ಲಕ್ಷ ಬೆಲೆ ಬಾಳುವ 68 ಗ್ರಾಂ ಚಿನ್ನದ ಸರಗಳು, ಕೃತ್ಯಕ್ಕೆ ಬಳಸಿದ್ದ 2-ದ್ವಿಚಕ್ರವಾಹನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಒಬ್ಬ ಆರೋಪಿಯು ಈ ಹಿಂದೆ
ಹೊನ್ನವಳ್ಳಿ ಪೊಲೀಸ್ ಠಾಣೆ, ಗುಬ್ಬಿ ಪೊಲೀಸ್ ಠಾಣೆ, ಗಂಡಸಿ ಪೊಲೀಸ್ ಠಾಣೆ ಮತ್ತು ತಿಪಟೂರು ಟೌನ್ ಪೊಲೀಸ್ ಠಾಣೆಗಳಲ್ಲಿ ಕನ್ನಾ ಕಳವು, ವಾಹನ ಕಳವು, ಪೋ ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಮತ್ತೊಬ್ಬ ಆರೋಪಿಯು ತಿಪಟೂರು ಟೌನ್ ಪೊಲೀಸ್ ಠಾಣೆಯ ಕೊಲೆ ಪ್ರಯತ್ನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ-01 ಪ್ರಕರಣ. ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ-01 ಪ್ರಕರಣ. ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ-01 ಪ್ರಕರಣ, ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ-01 ಪ್ರಕರಣ ಸೇರಿದಂತೆ ಒಟ್ಟು 4 ಸುಲಿಗೆ ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಡಿಸಿಪಿ ಶ್ರೀ ಸೈದುಲು ಅಡಾವತ್. ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಮೇರಿ ಶೈಲಜ. ಎ.ಸಿ.ಪಿ. ಯಶವಂತಪುರ ಉಪವಿಭಾಗ ರವರ ನೇತೃತ್ವದಲ್ಲಿ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಹರಿಯಪ್ಪ.ಹೆಚ್ ಮತ್ತು ಸಿಬ್ಬಂದಿಯವರುಗಳು ಆರೋಪಿಗಳನ್ನು ದಸ್ತಗಿರಿ ಮಾಡಿ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ.