ಚುನಾವಣೆ ಬಂತೆಂದರೆ ಎಣ್ಣೆಹೊಳೆ ಹರಿಯಲಿದೆ ಎಂಬ ಆರೋಪಕ್ಕೆ ನಿದರ್ಶನ ಎಂಬಂತೆ ಇಂದು ಚಾಮರಾಜನಗರದಲ್ಲಿ ಯಾವುದೇ ದಾಖಲಾತಿ ಇಲ್ಲದ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಜಪ್ತಿ ಮಾಡಿದೆ.
ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಸರಬರಾಜು ಆದ Original choice deluxe whisky– ಪೆಟ್ಟಿಗೆಗಳಲ್ಲಿನ ಭದ್ರತಾ ಚೀಟಿಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ 14,688 ಲೀ. ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ವಿಸ್ಕಿಯ ಮೌಲ್ಯ 51,81,260 ರೂ. ಆಗಿದ್ದು ಈ ಸಂಬಂಧ ಸಂಬಂಧಪಟ್ಟವರ ಮೇಲೆ ಅಬಕಾರಿ ಇಲಾಖೆ ಮೊಕದ್ದಮೆ ದಾಖಲಿಸಿದೆ.
ಇನ್ನು, ಚಾಮರಾಜನಗರಕ್ಕೆ ಮೈಸೂರಿನಿಂದ ಪೂರೈಕೆಯಾದ ಬಿಯರ್ ಪೆಟ್ಟಿಗೆಗಳಲ್ಲಿ ಬಾರ್ ಕೋಡ್, ದಾಸ್ತಾನು ತಾಳೆಯಾಗದಿದ್ದರಿಂದ 12.47 ಲಕ್ಷ ಮೌಲ್ಯದ 8,970 ಲೀಟರ್ ಬಿಯರ್ ನ್ನು ವಶಕ್ಕೆ ಪಡೆದು ಬ್ರೀವರಿ ಸನ್ನದುದಾರರು ಹಾಗೂ ಚಾಲಕರ ಮೇಲೆ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.
ಕಳೆದ ಒಂದೂವರೆ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲೆಯ ಅಬಕಾರಿ ಇಲಾಖೆಯು 360 ಪ್ರಕರಣ ದಾಖಲಿಸಿ 370 ಮಂದಿಯನ್ನು ಬಂಧಿಸಿದ್ದು ವಶಪಡಿಸಿಕೊಂಡ ಮದ್ಯದ ಮೌಲ್ಯ ಒಂದು ಕೋಟಿ ರೂ. ದಾಟಲಿದೆ ಎಂದು ತಿಳಿದುಬಂದಿದೆ.