ದಿನಾಂಕ 09/09/2021 ರಿಂದ ದಿನಾಂಕ 10/09/2021 ನಡುವೆ ವಿರಾಜಪೇಟೆ ತಾಲ್ಲೂಕು ಕಳತ್ಮಾಡು ಗ್ರಾಮದ ನಿವಾಸಿ ಒಂಟಿಯಾಗಿ ವಾಸಮಾಡಿಕೊಂಡಿದ್ದ ಅಂಗವಿಕಲರಾದ ಬಿ.ಜಿ.ಉದಯ ಶಂಕರ್ ಎಂಬುವವರನ್ನು ಆಸ್ತಿ ವೈಷಮ್ಯದಿಂದ ಯಾರೋ ದುಷ್ಕರ್ಮಿಗಳು ಮರ್ಮಾಂಗಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದು ಈ ಸಂಬಂದ ನೀಡಿದ ದೂರಿನ ಮೇರೆ ಸಿದ್ದಾಪುರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಸಿದ್ದಾಪುರ ಪೊಲೀಸ್ ಠಾಣಾ ಪಿ.ಎಸ್.ಐ ರವರ ನೇತೃತ್ವದ ತಂಡಗಳು ದಿನಾಂಕ-16/09/2021 ರಂದು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಳತ್ಮಾಡು ಗ್ರಾಮದ ಬಿ.ಎಸ್.ಸಂದೀಪ್, ಬಿ.ಜೆ.ಸುಂದರ ಹಾಗೂ ಗೋಣಿಕೊಪ್ಪದ ಮೊಹಮ್ಮದ್ ಸುಲೈಮಾನ್@ ವಿನೋದ್ ಪೂಜಾರಿ ಎಂಬ ಆರೋಪಿಗಳನ್ನು ಬಂದಿಸಿದ್ದು ಆರೋಪಿತರುಗಳು ಆಸ್ತಿಯ ವಿಚಾರದಲ್ಲಿ ದಿನಾಂಕ-09/09/2021 ರಂದು ರಾತ್ರಿ ವೇಳೆಯಲ್ಲಿ ಉದಯ ಶಂಕರ್ ರವರನ್ನು ಕಳತ್ಮಾಡು ಗ್ರಾಮದಿಂದ ಕಾರಿನಲ್ಲಿ ಎತ್ತಿಕೊಂಡು ಹೋಗಿ ಗೋಣಿಕೊಪ್ಪ ಪಂಚವಳ್ಳಿ ಕಡೆಗೆ ಹೋಗುವ ಮಾರ್ಗದ ಮಧ್ಯದಲ್ಲಿನ ನಿರ್ಜನ ಪ್ರದೇಶದಲ್ಲಿ ಬೆಡ್ ಶೀಟ್ನಿಂದ ಉಸಿರುಗಟ್ಟಿಸಿ, ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ನಂತರ ಮೃತ ಶರೀರವನ್ನು ಆತನ ವಾಸದ ಮನೆಗೆ ತಂದು ಮಲಗಿಸಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಪಿ.ವಿ.ವೆಂಕಟೇಶ್, ಸಿದ್ದಾಪುರ ಪೊಲೀಸ್ ಠಾಣಾ ಪಿ.ಎಸ್.ಐ ಪಿ. ಮೋಹನ್ ರಾಜು. ಎ.ಎಸ್.ಐ. ಎನ್.ಟಿ.ತಮ್ಮಯ್ಯ, ಸಿಬ್ಬಂದಿಗಳಾದ ಟಿ.ಜೆ.ರತನ್, ವಸಂತಕುಮಾರ್.ಹೆಚ್.ಕೆ. ಮಲ್ಲಪ್ಪ ಮುಶಿಗೇರಿ, ಹೆಚ್.ಎಂ.ಲಕ್ಷ್ಮೀಕಾಂತ, ಗೋವರ್ಧನ, ಕಿರಣ, ಚರ್ಮಣ, ರಾಜೇಶ್ ಹಾಗೂ ಗಿರೀಶ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,