28.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಡವೆಗಳು ಹಾಗೂ 50 ಸಾವಿರ ವಶ.
ರಾಜಗೋಪಾಲನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರು ದಿನಾಂಕ: 27-03-2024 ರ ರಾತ್ರಿ ಠಾಣಾ ವ್ಯಾಪ್ತಿಯ ಲಗ್ಗೆರೆ ಮುಖ್ಯರಸ್ತೆಯಲ್ಲಿ ಗಸ್ತಿನ ಕರ್ತವ್ಯದಲ್ಲಿದಾಗ ಅದೇ ರಸ್ತೆಯಲ್ಲಿರುವ ಒಂದು ಜ್ಯೂವೆಲ್ಲರಿ ಅಂಗಡಿ ಮುಂಭಾಗ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳನ್ನು ಹಿಡಿದು ಪ್ರಶ್ನಿಸಲಾಯಿತು. ಅವರುಗಳು ಸಮಂಜಸವಾದ ಉತ್ತರ ನೀಡದ ಕಾರಣ ಅವರನ್ನು ಶೋಧನೆಗೊಳ ಪಡಿಸಲಾಯಿತು. ಅದರಲ್ಲಿ ಒಬ್ಬನ ಪ್ಯಾಂಟ್ ಜೇಬಿನಲ್ಲಿ ಒಂದು ಜೊತೆ ಬೆಳ್ಳಿಯ ಕಾಲುಚೈನು ಹಾಗೂ ಮತ್ತೊಬ್ಬನ ಜೇಬಿನಲ್ಲಿ ಬೆಳ್ಳಿಯ ಉಡುದಾರವಿದ್ದು, ಅವರುಗಳು ಸರಿಯಾದ ಉತ್ತರವನ್ನು ನೀಡದೆ ತಡವರೆಸಿದ್ದು ಇದನ್ನು ಅರಿತ ಗಸ್ತಿನ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿರುತ್ತಾರೆ. ನಂತರ ದಿನಾಂಕ: 28/03/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರೂಡಿಸಿ 10 ದಿನಗಳ ವರೆಗೆ ಪೊಲೀಸ್ ವಶಕ್ಕೆ ಪಡೆಯಲಾಯಿತು.
ತನಿಖೆಯನ್ನು ಮುಂದುವರೆಸಿ, ಈ ಇಬ್ಬರು ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಅವರುಗಳು ತಮ್ಮ ಸಹಚರರಾದ ಮತ್ತಿಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದು ಹಾಗೂ ಮತ್ತೋರ್ವ ವ್ಯಕ್ತಿಯು ರಿಸೀವರ್ ಆಗಿರುತ್ತಾನೆಂದು ಸಹ ತಿಳಿಸಿರುತ್ತಾರೆ. ದಿನಾಂಕ:29/03/2024 ರಂದು ಕಳ್ಳತನ ಮಾಡಿದ ವ್ಯಕ್ತಿಯನ್ನು ಹಾಗೂ ರಿಸೀವರ್‌ನನ್ನು ವಶಕ್ಕೆ ಪಡೆಯಲಾಯಿತು. ಕಳ್ಳತನ ಮಾಡಿದ ವ್ಯಕ್ತಿಯು ರಾಜಗೋಪಾಲನಗರ ಪೊಲೀಸ್ ಠಾಣೆಯ ರೌಡಿಯಾಗಿರುತ್ತಾನೆ. ಈ ಇಬ್ಬರನ್ನು ಸಹ ದಿನಾಂಕ:30/03/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜಡಿಸಿ 08 ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆಯಲಾಯಿತು. ಕಳ್ಳತನ ಮಾಡಿದ ವ್ಯಕ್ತಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಅವರುಗಳು ಬೆಂಗಳೂರಿನ ಉತ್ತರಹಳ್ಳಿ ಬಿ.ಹೆಚ್.ಸಿ.ಎಸ್ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಚಿನ್ನ-ಬೆಳ್ಳಿ ಒಡವೆಗಳು ಹಾಗೂ ಹಣವನ್ನು ಕಳುವು ಮಾಡಿದ್ದಾಗಿ ತಪ್ಪೋಪ್ಪಿಕೊಂಡಿರುತ್ತಾರೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ಪೊಲೀಸ್ ವಶದಲ್ಲಿದ್ದ ಆರೋಪಿಗಳಿಂದ 470 ಚಿನ್ನಾಭರಣಗಳು, 500 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ 50 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 1-ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಕೆ 28.50 (ಇಪ್ಪತ್ತೆಂಟು ಲಕ್ಷದ ಐವತ್ತು ಸಾವಿರ ರೂಪಾಯಿ).
ಬಿ.ಹೆಚ್.ಸಿ.ಎಸ್ ಲೇಔಟ್ ಮನೆಯೊಂದರಲ್ಲಿ ಚಿನ್ನ-ಬೆಳ್ಳಿ ಒಡವೆಗಳು ಕಳ್ಳತನವಾಗಿರುವ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯವರು ಓರ್ವನನ್ನು ಬಂಧಿಸಿ ತನಿಖೆ ಕೈಗೊಂಡಿರುತ್ತಾರೆ. ಆತನು ಸಹ ರಾಜಗೋಪಾಲ ನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿರುತ್ತಾನೆ. ಈತನು ಕೇಂದ್ರ ಕಾರಾಗೃಹದಲ್ಲಿದ್ದು, ದಿನಾಂಕ:-02/03/2024 ರಂದು ಜಾಮೀನಿನ ಮೇಲೆ ಹೊರಬಂದಿರುತ್ತಾನೆ. ಆತನ ಪತ್ತೆ ಬಗ್ಗೆ ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಸೈದುಲು ಅಡಾವತ್, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಶ್ರೀ. ಜಿ.ಆರ್.ರಮೇಶ್, ಸಹಾಯಕ ಪೊಲೀಸ್ ಆಯುಕ್ತರು ಪೀಣ್ಯ ಉಪ ವಿಭಾಗ ರವರ ನೇತೃತ್ವದಲ್ಲಿ, ರಾಜಗೋಪಾಲನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಪುನೀತ್ ಬಿ.ಎನ್. ಮತ್ತು ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.