ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯತ್ರಿನಗರದಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:26/07/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:25/07/2024 ರಂದು ಬೆಳಿಗ್ಗೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬಂದು ನೋಡಲಾಗಿ, ಮನೆಯ ಬಾಗಿಲಿನ ಲಾಕ್ ಹೊಡೆದಿದ್ದು, ಮನೆಯೊಳಗಿನ ಕೊಠಡಿಯ ಬೀರುವಿನಲ್ಲಿಟ್ಟಿದ್ದ ನಗದು ಹಣ, ಚಿನ್ನದ ಒಡವೆಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಹಗಲು ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಪಡೆದು, ದಿನಾಂಕ:01/08/2024 ರಂದು ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಪಿ. ರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆದು, ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಕಳುವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಆರೋಪಿಯು ನೀಡಿದ ಮಾಹಿತಿ ಮೇರೆಗೆ, ಆರೋಪಿಯು ಮನೆಯಲ್ಲಿಟ್ಟಿದ್ದ ಸುಮಾರು 14.5 ಲಕ್ಷ ಮೌಲ್ಯದ 68 ಗ್ರಾಂ ತೂಕದ ಚಿನ್ನಾಭರಣ, 180 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1-ದ್ವಿ-ಚಕ್ರ ವಾಹನವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ದಿನಾಂಕ:02/08/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀ ಹೆಚ್. ಕೃಷ್ಣಮೂರ್ತಿ, ಎಸಿಪಿ ಮಲ್ಲೇಶ್ವರಂ ಉಪ ವಿಭಾಗ ಮತ್ತು ಶ್ರೀ ಸುರೇಶ ಹೆಚ್.ವಿ., ಪೊಲೀಸ್ ಇನ್ಸ್‌ಪೆಕ್ಟರ್, ಸುಬ್ರಮಣ್ಯನಗರ ಪೊಲೀಸ್ ಠಾಣೆ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.