ಉಡುಪಿ, ಸೆ. 2: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಉಡುಪಿ ಜಿಲ್ಲಾ ಪೊಲೀಸರು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಸೆಪ್ಟೆಂಬರ್ 4ರಿಂದ 5ರವರೆಗೆ ನಡೆಯಲಿರುವ ಉತ್ಸವದ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಪ್ರಮುಖ ಸೂಚನೆಗಳು:
ದೇವಸ್ಥಾನ ಹಾಗೂ ಉತ್ಸವ ನಡೆಯುವ ಪ್ರದೇಶಗಳಲ್ಲಿ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು.
ಮೊಬೈಲ್, ಪರ್ಸ್, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
ವಾಹನಗಳನ್ನು ನೋ-ಪಾರ್ಕಿಂಗ್ ಪ್ರದೇಶಗಳಲ್ಲಿ ನಿಲ್ಲಿಸದೆ, ಪೊಲೀಸ್ ಇಲಾಖೆ ಸೂಚಿಸಿರುವ ಸ್ಥಳಗಳಲ್ಲೇ ಪಾರ್ಕಿಂಗ್ ಮಾಡಬೇಕು.
ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ರಸ್ತೆಯಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸುವುದನ್ನು ತಪ್ಪಿಸಬೇಕು.
ಮೆರವಣಿಗೆ ಹಾಗೂ ಉತ್ಸವದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ, ಬ್ಯಾರಿಕೇಡ್‌ಗಳನ್ನು ದಾಟದಂತೆ ಎಚ್ಚರಿಕೆ ವಹಿಸಬೇಕು.
ಮಕ್ಕಳು ಹಾಗೂ ವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜನದಟ್ಟಣೆಯ ಸಂದರ್ಭದಲ್ಲಿ ಕುಟುಂಬ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತವಾಗಿ ಸಂಚರಿಸಬೇಕು.
ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.
ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ
ಯಾವುದೇ ರೀತಿಯ ತುರ್ತು ಪರಿಸ್ಥಿತಿ, ಕಳ್ಳತನ, ಕಾಣೆಯಾದ ವ್ಯಕ್ತಿ ಅಥವಾ ಇತರ ಪೊಲೀಸ್ ಸಹಾಯದ ಅಗತ್ಯವಿದ್ದಲ್ಲಿ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
“ಉತ್ಸವವನ್ನು ಸಂಭ್ರಮದಿಂದ ಆಚರಿಸಿ – ಸುರಕ್ಷತೆಯನ್ನು ಮರೆಯದಿರಿ” ಎಂಬ ಸಂದೇಶದೊಂದಿಗೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವವನ್ನು ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ಆಚರಿಸಲು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ





