ಶಿರ್ವ:ದಿನಾಂಕ 01.06.2026 ರಂದು ಕಾಪು ತಾಲೂಕು ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಗೆ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಇರುವ ಬಗ್ಗೆ ಮಾಹಿತಿಯ ಮೇರೆಗೆ ಶಿರ್ವ ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ ಮರಬದ ಇವರು ಸಹಾಯಕ ನಿರ್ದೇಶಕರು ಪಶು ವೈದ್ಯಕೀಯ ಆಸ್ಪತ್ರೆ ಕಾಪು ಹಾಗೂ ಜಿಲ್ಲಾ ಅಪರಾದ ಪರಿಶೀಲನಾ ಅಧಿಕಾರಿಗಳ ಸಮಕ್ಷಮ ಮಹಜರು ಮುಖೇನ ಜಾನುವಾರಿನ ಮೇಲ್ದವಡೆಯ ಭಾಗ, ಎರಡು ಗೆರಸುಗಳು ಮತ್ತು ಮಾಂಸ, ಹೊಟ್ಟೆಯ ಒಳಗಿನ ಭಾಗಗಳನ್ನುg ಸ್ಥಳದಿಂದ ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2026 ಕಲಂ: 4, 12 The Karnataka Prevention of slaughter and preservation of cattle Act 2020 ನಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣವು ಅತೀ ಸೂಕ್ಷ್ಮವಾಗಿದ್ದು ಶಿರ್ವ ಪೊಲೀಸರ ತಂಡ ಸುಮಾರು 50ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿ , ಅತ್ಯಧಿಕ ತಂತ್ರಜ್ಞಾನವುಳ್ಳ ಡ್ರೋನ್ ಗಳನ್ನು ಪಾಪನಾಶಿನಿ ಹೊಳೆಯ ಸುತ್ತಮುತ್ತಲು ಹರಿಸಿ ಪರಿಶೀಲನೆ ನಡೆಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್‌ನ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಶಿರ್ವ ಪೊಲೀಸ್ ಠಾಣೆಯ ಎಸ್ಐ ಹಾಗೂ ತಂಡದವರು ಅತೀ ಮುತುವರ್ಜಿಯಿಂದ ಕೇವಲ 4 ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.

ಸದರಿ ಪ್ರಕರಣದಲ್ಲಿ ಜಾನುವಾರನ್ನು ಕಡಿದು ಮಾಂಸ ಮಾಡಿ ಅವಶೇಷಗಳನ್ನು ಹೊಳೆಗೆ ಎಸೆದ ಆರೋಪಿ ಅಶೋಕ, ಪ್ರಾಯ: 52 ವರ್ಷ, ತಂದೆ: ದಿ: ಚಿಂಗ ಕೊರಗ, ವಾಸ: ಶಿರ್ವ ಪದವು, ಬಬ್ಬು ಸ್ವಾಮಿ ದೈವಸ್ಥಾನದ ಹತ್ತಿರ, ಪದವು, ಶಿರ್ವ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ಈ ದಿನ ದಿನಾಂಕ 05.06.2026 ರಂದು ಶಿರ್ವ ಗ್ರಾಮದ ಪದವು ಎಂಬಲ್ಲಿ ದಸ್ತಗಿರಿ ಮಾಡಿ ಆರೋಪಿಯು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಜಾನುವಾರಿನ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ ಅಸ್ತ್ರಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಹಾಗೂ ಅಝಮತ್ ಆಲಿ ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ ರವರ ನೇತ್ರತ್ವದಲ್ಲಿ ಶಿರ್ವ ಠಾಣಾ ಉಪ ನಿರೀಕ್ಷಕರಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ ಎಸ್, ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಮಂಜುನಾಥ ಅಡಿಗ, ಚಾಲಕ ಪ್ರಕಾಶ್ ಸುವರ್ಣ, ಕಿರಣ್, ಯಲ್ಲಾಲಿಂಗ, ಕಾಪು ಪೊಲೀಸ್ ಠಾಣೆಯ ರಘು ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ಸಿಬ್ಬಂದಿಯವರಾದ ರಹಿಮಾನ್, ಸಂದೇಶ್ ರವರು ಪತ್ತೆಕಾರ್ಯಾಚರಣೆ ನಡೆಸಿರುತ್ತಾರೆ. ಶಿರ್ವ ಠಾಣೆ ಎಸ್ ಐ ಹಾಗೂ ಸಿಬ್ಬಂದಿಯನ್ನು ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಸುತ್ತಮುತ್ತಲಿನ ಪರಿಸರದಲ್ಲಿ ಶಿರ್ವ ಠಾಣೆಯು ಒಂದು ಮಾದರಿ ಠಾಣೆಯಾಗಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







