ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ, ನಿಮ್ಹಾನ್ಸ್ ಆಸ್ಪತ್ರೆ ಜಂಕ್ಷನ್‌ನಲ್ಲಿ ದಿನಾಂಕ: 15/05/2024 ರಂದು ಸಂಜೆ ಫಿರಾದುದಾರರು ಬಿ.ಎಂ.ಟಿ.ಸಿ ಬಸ್‌ನ್ನು ಹತ್ತಿ ನಂತರ ರಿಚ್‌ಮಂಡ್ ಸರ್ಕಲ್‌ನ ಹತ್ತಿರ ಇಳಿದು ನೋಡಲಾಗಿ, ಬಾಗ್‌ನಲ್ಲಿದ್ದ ಮೊಬೈಲ್ ಫೋನ್‌ನ್ನು ಯಾರೋ ಕಳ್ಳತನ ಮಾಡಿರುತ್ತಾರೆ. ಈ ಬಗ್ಗೆ ದಿನಾಂಕ:19/05/2024 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಈ ದೂರಿನನ್ವಯ ಮೊಬೈಲ್ ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಶೋಧ ನಡೆಸುತ್ತಿದ್ದ ವೇಳೆಯಲ್ಲಿ, ಓರ್ವನು ಸೋಮೇಶ್ವರನಗರ ಮುಖ್ಯರಸ್ತೆಯಲ್ಲಿರುವ ಗೆಸ್ಟ್‌ಹೌಸ್‌ವೊಂದರಲ್ಲಿ ವಾಸವಿದ್ದು, ತಾನು ವಾಸವಿದ್ದ ಗೆಸ್ಟ್ ಹೌಸ್ ಮುಂಭಾಗ ಮೊಬೈಲ್ ಫೋನ್‌ನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದದ್ದು ಕಂಡು ಬಂದಿರುತ್ತದೆ. ನಂತರ ಪೊಲೀಸರು ಆತನನ್ನು ದಿನಾಂಕ: 19/05/2024ರಂದು ವಶಕ್ಕೆ ಪಡೆದು, ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಲಾಗಿ, ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ನಂತರ ದಿನಾಂಕ:20/05/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜಪ್ಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿ, ತಾನು ಮತ್ತು ತನ್ನ ಸಹಚರರು ಇನ್ನೂ ಮೂರು ವ್ಯಕ್ತಿಗಳು ಸೇರಿ ಒಟ್ಟು 4 ಜನರು ಬೆಂಗಳೂರಿನ ಜಯನಗರ, ಶಿವಾಜಿನಗರ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಹಾಗೂ ಇನ್ನಿತರೆ ಜನಸಂದಣಿ ಇರುವ ಪ್ರದೇಶ ಮತ್ತು ಬಸ್‌ಗಳಲ್ಲಿ ಸಾರ್ವಜನಿಕರಂತೆ ವರ್ತಿಸಿ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದುದ್ದಾಗಿ ವಿಚಾರಣೆಯ ವೇಳೆ ತಿಳಿಸಿರುತ್ತಾನೆ. ನಂತರ ಆತನು ವಾಸವಿದ್ದ ಗೆಸ್ಟ್‌ಹೌಸ್‌ನಲ್ಲಿ ಕಳುವು ಮಾಡಿದ ಮೊಬೈಲ್‌ಗಳನ್ನು ಇಟ್ಟಿರುವುದಾಗಿ ತಿಳಿಸಿದ್ದು, ಆತನಿಂದ * 19.50 (ಹತ್ತೊಬ್ಬತ್ತು ಲಕ್ಷದ ಐವತ್ತು ಸಾವಿರ ರೂಪಾಯಿ) ಬೆಲೆ ಬಾಳುವ 32 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈತನ ಮೂವರು ಸಹಚರರು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶೀ.ಲೋಕೇಶ್ ಜಗಲಾಸ, ಐಪಿಎಸ್, ರವರ ಮಾರ್ಗದರ್ಶದಲ್ಲಿ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರಾದ ಶ್ರೀ.ನಾರಾಯಣ ಸ್ವಾಮಿ, ವಿ ರವರ ನೇತೃತ್ವದಲ್ಲಿ ಸಿದ್ಧಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.