ಪ್ರಧಾನ ಮಂತ್ರಿಗಳು ಸಂಚರಿಸುವ ದಾರಿಯುದ್ದಕ್ಕೂ ಹಾಗೂ ಕಾರ್ಯಕ್ರಮ ಸ್ಥಳದಲ್ಲಿ ಭದ್ರತೆ ಬಿಗಿ ಇರಲಿದೆ. 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದರು.
ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅನ್ವಯವಾಗಲಿದೆ. ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್, ಮಹಾರಾಣಿ ಸೇತುವೆ, ಶೇಷಾದ್ರಿ ರೈಲು ನಿಲ್ದಾಣದ ಪ್ರವೇಶ ದ್ವಾರದವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ, ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳಗಳು ಸೇರಿದಂತೆ ಪ್ರಧಾನಿಯ ಸಂಚಾರವಿರುವ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.