ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಿರಾದುದಾರರು ದಿನಾಂಕ:08-03-2024 ರಂದು ಶಿವರಾತ್ರಿ ಪ್ರಯುಕ್ತ, ಹತ್ತಿರದ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದು, ನಂತರ ಮನೆಗೆ ಬಂದು ನೋಡಲಾಗಿ, ಪಿರಾದುದಾರರು ಧರಿಸಿದ್ದ 32 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕತ್ತಿನಲ್ಲಿರಲಿಲ್ಲ. ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲುಮಾಡಿರುತ್ತಾರೆ.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರನ್ನು ದಿನಾಂಕ:22.03.2024 ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರುಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಅವರಿಂದ 7 14.9 ಲಕ್ಷ ಬೆಲೆ ಬಾಳುವ 233 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ವಶಕ್ಕೆ ಪಡೆದ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯು ಈ ಹಿಂದೆ 2009 ನೇ ಸಾಲಿನಲ್ಲಿ ಶಂಕರಪುರ ಪೊಲೀಸ್ ಠಾಣೆ ಮತ್ತು ಅನೇಕಲ್ ಪೊಲೀಸ್ ಠಾಣೆಗಳ ಮನೆ ಕಳವು, ಸಾಮಾನ್ಯ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುವುದು ತಿಳಿದುಬಂದಿರುತ್ತದೆ. ಇವರುಗಳು ಜಾತ್ರೆ, ದೇವರ ಉತ್ಸವ, ಶುಭ ಸಮಾರಂಭಗಳಲ್ಲಿರುವ ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರುಗಳ ಬಳಿಯಿರುವ ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಪ್ರವೃತ್ತಿಯನ್ನು ಹೊಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ವಶ ಪಡಿಸಿಕೊಂಡ ಮಹಿಳೆಯರಿಂದ ರಾಜಾಜಿನಗರ ಪೊಲೀಸ್ ಠಾಣೆಯ ಕಳವು ಪ್ರಕರಣ, ಮಲ್ಲೇಶ್ವರಂ ಪೊಲೀಸ್ ಠಾಣೆಯ-3 ಕಳವು ಪ್ರಕರಣಗಳು ಹಾಗೂ ವಯ್ಯಾಲಿಕಾವಲ್ ಪೊಲೀಸ್ ಠಾಣೆಯ-3 ಕಳವು ಪ್ರಕರಣಗಳು ಸೇರಿದಂತೆ ಒಟ್ಟು 7 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.
ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀ ಹೆಚ್. ಕೃಷ್ಣಮೂರ್ತಿ, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ಮತ್ತು ಶ್ರೀ ಪ್ರಮೋದ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್, ರಾಜಾಜಿನಗರ ಪೊಲೀಸ್ ಠಾಣೆ ರವರ ನೇತೃತ್ವದ ತಂಡವು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.