ದಿನಾಂಕ 21-06-2023 ರಂದು ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ಇ.ಎಲ್ ಪಾರ್ಕ್ ಬಳಿ ಮೂರು ಜನ ಅಪರಿಚಿತ ಆಸಾಮಿಗಳು ಎರಡು ಕಾರುಗಳಲ್ಲಿ, ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿರುತ್ತಾರೆಂದು ಖಚಿತ ಮಾಹಿತಿಯು ದೊರೆತ್ತಿರುತ್ತದೆ. ಮಾಹಿತಿಯ ಮೇರೆಗೆ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ, ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡ ಮೇರೆಗೆ ಸದರಿ ಆರೋಪಿಗಳ ವಿರುದ್ಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಒಟ್ಟು 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಅವರಿಂದ 13 ಕೆ.ಜಿ. ಗಾಂಜಾ ಮತ್ತು 1 ಕೆ.ಜಿ. ಗಾಂಜಾ ಎಣ್ಣೆ ಹಾಗೂ ಕೃತ್ಯಕ್ಕೆ ಬಳಸಿದ 2 ಕಾರುಗಳನ್ನು ವಶಪಡಿಸಿಕೊಂಡಿರುತ್ತೆ.
ಈ ಪ್ರಕರಣದಲ್ಲಿನ ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ, ಆರೋಪಿಗಳು ಮಹಾರಾಷ್ಟ್ರ ರಾಜ್ಯದ ಗಡಿಭಾಗದ ಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿಕೊಂಡು ಬಸ್ಸಿನ ಮೂಲಕ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾರೆ. ಮೂರು ಆರೋಪಿಗಳ ಪೈಕಿ ಒಬ್ಬ ಮೂಲತಃ ಮಹಾರಾಷ್ಟ್ರದವನಾಗಿದ್ದು, ಉಳಿದ ಇಬ್ಬರು ಆರೋಪಿಗಳು ಸ್ಥಳೀಯರಾಗಿರುತ್ತಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬ ಆರೋಪಿಯ ವಿರುದ್ಧ ಈ ಹಿಂದೆ ಸದಾಶಿವನಗರ ಮತ್ತು
ಜಾಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿದ್ದು, ಜೈಲಿಗೆ ಹೋಗಿ ಬಂದಿರುತ್ತಾನೆ.
ಈ ಪ್ರಕರಣದಲ್ಲಿ ಶ್ರೀ ಶಿವ ಪ್ರಕಾಶ್ ದೇವರಾಜು, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಪ್ರವೀಣ್ ಎಂ, ಎಸಿಪಿ ಮಲ್ಲೇಶ್ವರಂ ಉಪ ವಿಭಾಗ ಮತ್ತು ಶ್ರೀ ವೆಂಕಟೇಗೌಡ, ಪೊಲೀಸ್ ಇನ್ಸ್‌ಪೆಕ್ಟರ್, ನಂದಿನಿಲೇಔಟ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿಯವರೊಂದಿಗೆ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.