77 ಗ್ರಾಂ ನ 02 ಚಿನ್ನದ ಮಾಂಗಲ್ಯ ಸರಗಳು ಮತ್ತು ಕೃತ್ಯಕ್ಕೆ ಬಳಸಿದ್ದ 1-ದ್ವಿ-ಚಕ್ರ ವಾಹನ ವಶ. ಮೌಲ್ಯ 15 ಲಕ್ಷ. ಬೆಂಗಳೂರು ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣಾ ಸರಹದ್ದಿನ ವಿನಾಯಕನಗರದಲ್ಲಿ ವಾಸವಿರುವ ಫಿರಾದುದಾರರು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಿನಾಂಕ:04/09/2024ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ವಾಸವಿರುವ ಮನೆಯಲ್ಲಿಯೇ ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡಿರುತ್ತಾರೆ. ದಿನಾಂಕ:04/09/2024 ರಂದು ಬೆಳಗ್ಗೆ ಫಿರಾದುದಾರರು ಅಂಗಡಿಯಲ್ಲಿರಬೇಕಾದರೆ, ಸಕ್ಕರೆಯನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಓರ್ವ ಅಪರಿಚಿತ ವ್ಯಕ್ತಿಯು ಫಿರಾದುದಾರರು ಸಕ್ಕರೆಯನ್ನು ತೂಕ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಇದ್ದಕ್ಕಿದ್ದಂತೆ ಫಿರಾದುದಾರರ ಕತ್ತಿನಲ್ಲಿದ್ದ ಸುಮಾರು 48 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:14/09/2024ರಂದು ವೈಟ್‌ಫೀಲ್ಡ್‌ನ ಹಗದೂರು ಮುಖ್ಯರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದ 48 ಗ್ರಾಂ ಚಿನ್ನದ ಮಾಂಗಲ್ಯ ಸರದ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಮಾಂಗಲ್ಯ ಸರವನ್ನು ಸುಲಿಗೆ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ: 14/09/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 6 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಬೆಂಗಳೂರಿನ ಹನುಮಂತನಗರದಲ್ಲಿ ಚಿನ್ನದ ಸರ ಅಪಹರಣ ಮಾಡಿರುವುದಾಗಿ ತಿಳಿಸಿರುತ್ತಾನೆ. ದಿನಾಂಕ:16/09/2024 ರಂದು 29 ಗ್ರಾಂ ಚಿನ್ನದ ಸರವನ್ನು ಆರೋಪಿಯ ತಾಯಿಯು ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿದ ಮೇರೆಗೆ ಅದನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:17/09/2024 ರಂದು ಆರೋಪಿಯ ಮನೆಯಿಂದ ಕೃತ್ಯಕ್ಕೆ ಬಳಸಿದ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊ ಳ್ಳಲಾಯಿತು. ಈ ಪ್ರಕರಣದ ಆರೋಪಿಯ ವಶದಿಂದ ಒಟ್ಟಾರೆ 77 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 5,00,000/- (ಐದು ಲಕ್ಷ ರೂಪಾಯಿ).
ದಿನಾಂಕ:20/09/2024ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಪ್ರಕರಣದ ಆರೋಪಿಯ ಬಂಧನದಿಂದ 1)ವೈಟ್ ಫೀಲ್ಡ್ ಪೊ.ಠಾಣೆಯ-01 ಸರ ಅಪಹರಣ ಪ್ರಕರಣ 2)ಹನುಮಂತನಗರ ಪೊ.ಠಾಣೆಯ-01 ಸರ ಅಪಹರಣ ಪ್ರಕರಣ ಸೇರಿದಂತೆ ಒಟ್ಟು 02 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು, ವೈಟ್ ಫೀಲ್ಡ್ ಡಾ:ಶಿವಕುಮಾರ್ ಗುಣಾರೇ, ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ವೈಟ್ ಫೀಲ್ಡ್ ಉಪ ವಿಭಾಗ ಶ್ರೀಮತಿ.ರೀನಾ ಸುವರ್ಣ ರವರ ಮಾರ್ಗದರ್ಶನದಲ್ಲಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಗುರುಪ್ರಸಾದ್.ಎ ಹಾಗೂ ಅಧಿಕಾರಿ/ಸಿಬ್ಬಂದಿರವರು ತಂಡ ಪ್ರಕರಣವನ್ನು ಯಶಸ್ವಿಯಾಗಿರುತ್ತಾರೆ.