ಕೊಡಗಿನ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಸಿದ್ದಾಪುರ ಗುಯ್ಯ ಗ್ರಾಮದ ನಿವಾಸಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಎನ್.ಆರ್.ರಂಜಿತ್ (25) ಹಾಗೂ ಹೈಸ್ಕೂಲ್ ಪೈಸಾರಿ ನಿವಾಸಿ ಕೂಲಿ ಕಾರ್ಮಿಕ ಎಸ್.ಶರಣು (23) ಬಂಧಿತ ಆರೋಪಿಗಳು.
ಶನಿವಾರ ಬೆಳಗ್ಗೆ ಅಮ್ಮತ್ತಿ ಪಟ್ಟಣದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದಾಖಲೆಯೂ ಇಲ್ಲದೆ, ಸಮರ್ಪಕ ಉತ್ತರವನ್ನೂ ನೀಡದೆ ಇದ್ದಾಗ ವಿಚಾರಣೆಗೆ ಒಳಪಡಿಸಲಾಯಿತು.ತನಿಖೆ ವೇಳೆ ಸತ್ಯವನ್ನು ಬಾಯಿಬಿಟ್ಟ ಆರೋಪಿಗಳು ಜೂ.9 ರಂದು ಸಿದ್ದಾಪುರ ಬಳಿಯ ನೆಲ್ಯಹುದೀಕೇರಿಯಿಂದ ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ವೀರಾಜಪೇಟೆಯಲ್ಲಿ ಮಾರಾಟ ಮಾಡಲು ತೆರಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಪೊನ್ನಂಪೇಟೆ ವ್ಯಾಪ್ತಿಯಿಂದ ಮತ್ತೊಂದು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ವಾಹನಗಳ ಗುರುತು ಪತ್ತೆಯಾಗದಂತೆ ಬಿಡಿಭಾಗಗಳನ್ನು ಅದಲು ಬದಲು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ಅವರ ನಿರ್ದೇಶನದಂತೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗ ಭೀ ಬಾಣಸೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ತೀರ್ಥಕುಮಾರ್, ರಾಮಪ್ಪ, ಶ್ರೀಕಾಂತ್, ಪುರುಷೋತ್ತಮ ಹಾಗೂ ಚಾಲಕ ಸಂದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್