ದಿನಾಂಕ 14-06-2021 ರಂದು ಕಾಫೀ ತೋಟವೊಂದರಿಂದ ತೇಗದ ಮರವನ್ನು ಅಕ್ರಮವಾಗಿ ಕಡಿದು ಮಾರುತಿ ಒಮ್ನಿ ವ್ಯಾನಿನಲ್ಲಿ ತುಂಬಿ ಕಳ್ಳ ಸಾಗಾಣಿಕೆ ಮಾಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೋಕು ವಾಲ್ನೂರು-ತ್ಯಾಗತ್ತೂರು ಜಂಕ್ಷನ್ ನಲ್ಲಿ ಒಮ್ನಿ ವ್ಯಾನನ್ನು ಪತ್ತೆಹಚ್ಚಿದ ಜಿಲ್ಲಾ ಡಿಸಿಐಬಿ ತಂಡ ಮಾಲು ಸಮೇತ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಸಿದ್ದಾಪುರ ಠಾಣಾ ಸರಹದ್ದಿನ ಚೆಟ್ಟಳ್ಳಿ ಕಾನನಕಾಡು ವ್ಯಾಪ್ತಿಯ ಕಾಫೀ ತೋಟವೊಂದರಿಂದ ತೇಗದ ಮರವನ್ನು ಅಕ್ರಮವಾಗಿ ಕಡಿದು ಒಮ್ನಿ ವ್ಯಾನಿನಲ್ಲಿ ಸುತ್ತಲೂ ಟೀ-ಶರ್ಟ್ಸ್ ಹಾಗೂ ಆಫ್-ಪ್ಯಾಂಟ್ ಗಳನ್ನು ನೇತು ಹಾಕಿ ಬಟ್ಟೆವ್ಯಾಪಾರ ಮಾಡುವ ಸೋಗಿನಲ್ಲಿ ವಿವಿಧ ಅಳತೆಯ 6 ತೇಗದ ಮರದ ನಾಟಾಗಳನ್ನು ತುಂಬಿ ಸಾಗಾಟ ಮಾಡುತ್ತಿದ್ದವರನ್ನು ಪತ್ತೆಹಚ್ಚಿ ದಾಳಿ ನಡೆಸಿದ ಜಿಲ್ಲಾ ಡಿಸಿಐಬಿ ನಿರೀಕ್ಷಕರವರ ತಂಡ ಆರೋಪಿಗಳಾದ ಟಿ.ವಿ ಲೊಹಿತ್, ತಂದೆ ಲೇಟ್ ವಾಸು, ಪ್ರಾಯ 26 ವರ್ಷ, ಚಾಲಕ ವೃತ್ತಿ, ವಾಸ ಅಂಗನವಾಡಿ ಹತ್ತಿರ ನೀರುಕೊಲ್ಲಿ, ಮಡಿಕೇರಿ ಹಾಗೂ ಟಿ.ಎಸ್ ಕೀರ್ತಿ, ತಂದೆ ಶ್ರೀಧರ್, ಪ್ರಾಯ 28ವರ್ಷ, ಕೂಲಿ ಕೆಲಸ, ವಾಸ ಮೆಕೇರಿ ಗ್ರಾಮ, ಮಡಿಕೇರಿ ಇವರನ್ನು ಬಂಧಿಸಿ ಆರೋಪಿತರಿಂದ ರೂ.1.5 ಲಕ್ಷ ಮೌಲ್ಯದ 6 ತೇಗದ ಮರದ ನಾಟಾಗಳು ಒಮ್ನಿ ವ್ಯಾನ್ ಸೇರಿದಂತೆ ಒಟ್ಟು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯು ಜಿಲ್ಲಾ ಡಿಸಿಐಬಿ ವಿಭಾಗದ ಪಿ.ಐ. ಶ್ರೀ ಎನ್.ಕುಮಾರ್ ಆರಾಧ್ಯರವರ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆ ಯಲ್ಲಿ ಸಿಬ್ಬಂದಿಗಳಾದ ಬಿ.ಎಲ್. ಯೊಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ಕೆ.ಎಸ್.ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಬಿ.ಜಿ.ಶರತ್ ರೈ, ಸುರೇಶ್ ಮತ್ತು ಶಶಿಕುಮಾರ್ ರವರು ಭಾಗಿಯಾಗಿದ್ದು ಇವರ ಕಾರ್ಯವನ್ನು ಪ್ರಶಂಸಿಸಲಾಗಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರಿಗೆ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗಿರುತ್ತದೆ. ಸಾರ್ವಜನಿಕರು ಇಂತಹ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕೋರಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್