ಉಡುಪಿ, ನವೆಂಬರ್ 20: ಉಡುಪಿ ಧರ್ಮಪ್ರಾಂತ್ಯದ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಸಹಯೋಗದಲ್ಲಿ ಕಾರಾಗೃಹದ ಕೈದಿಗಳಿಗಾಗಿ ಉಚಿತ ಕಾನೂನು ಅರಿವು ಮತ್ತು ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 19ರಂದು ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಲಾಯಿತು. ಸಂಜೆ 4.30ರಿಂದ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿತಿನ್ ವೈ. ರಾವ್ ಅವರು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಕೈದಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಕಾನೂನುಬದ್ಧ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಹಾಗೂ ಕಾನೂನಿನ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿಯ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯೆ ಡಾ. ಮಾನಸಾ ಇ.ಆರ್. ಅವರು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಾಗುವ ಹಾನಿಗಳ ಕುರಿತು ಮಾಹಿತಿ ನೀಡಿದರು. ಮಾದಕ ವಸ್ತುಗಳ ವ್ಯಸನದಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ವಿವರಿಸಿದ ಅವರು, ಪ್ರತಿಯೊಬ್ಬರೂ ಮಾದಕ ದ್ರವ್ಯಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಪ್ರಿಸನ್ ಮಿನಿಸ್ಟ್ರಿ ಇಂಡಿಯಾದ ರಾಜ್ಯ ಖಜಾಂಚಿ ಹಾಗೂ ಉಡುಪಿ ಪ್ರಿಸನ್ ಮಿನಿಸ್ಟ್ರಿಯ ಸದಸ್ಯರಾದ ವಾಲ್ಟರ್ ಮಾರ್ಟಿಸ್ ಅವರು ಮಾತನಾಡಿ, ಕೈದಿಗಳಲ್ಲಿ ವೈಯಕ್ತಿಕ ಪರಿವರ್ತನೆ, ಮಾನಸಿಕ ದೃಢತೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಅಗತ್ಯವನ್ನು ವಿವರಿಸಿದರು. ಅಲ್ಲದೆ, ಕೈದಿಗಳು ತಮ್ಮ ಜೀವನವನ್ನು ಹೊಸದಾಗಿ ರೂಪಿಸಿಕೊಳ್ಳಲು ಉಡುಪಿ ಪ್ರಿಸನ್ ಮಿನಿಸ್ಟ್ರಿಯ ಸದಸ್ಯರು ನೀಡುತ್ತಿರುವ ಸಹಕಾರ ಮತ್ತು ನೆರವಿನ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ವಿಜಯ್ ಕುಮಾರ್ ಚವ್ಹಾಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು, ಕಾರಾಗೃಹದಲ್ಲಿರುವ ಅವಧಿಯನ್ನು ಸಕಾರಾತ್ಮಕ ಬದಲಾವಣೆಗೆ ಬಳಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಜವಾಬ್ದಾರಿಯುತ ಹಾಗೂ ಆದರ್ಶ ನಾಗರಿಕರಾಗಿ ಸಮಾಜಕ್ಕೆ ಮರಳಬೇಕು ಎಂದು ಕೈದಿಗಳಿಗೆ ಕರೆ ನೀಡಿದರು. ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು, ಅರ್ಥಪೂರ್ಣ ಜೀವನ ನಡೆಸಬೇಕು ಹಾಗೂ ಮಾದಕ ದ್ರವ್ಯಗಳಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಸಲಹೆ ನೀಡಿದರು.
ಪ್ರಿಸನ್ ಮಿನಿಸ್ಟ್ರಿಯ ಸಂಯೋಜಕರಾದ ರೊಸಾರಿಯೋ ಡಿಸೋಜಾ ಅವರು ಸ್ವಾಗತಿಸಿದರು. ಸಿಸ್ಟರ್ ಮೆಲಾನಿ ಅವರು ಸಂಪನ್ಮೂಲ ವ್ಯಕ್ತಿ ಡಾ. ಮಾನಸಾ ಇ.ಆರ್. ಅವರನ್ನು ಪರಿಚಯಿಸಿದರು. ಕಾರಾಗೃಹದ ಸಿಬ್ಬಂದಿ ವಿನೀತ್ ಅವರು ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಉಡುಪಿ ಪ್ರಿಸನ್ ಮಿನಿಸ್ಟ್ರಿಯ ಸದಸ್ಯರಾದ ಮ್ಯಾಕ್ಸಿಮ್ ಡಿಸೋಜಾ, ವಿಕ್ಟರ್ ವಿಜಯ್ ಡಿಸೋಜಾ ಹಾಗೂ ವಲೇರಿಯನ್ ನೊರೊನ್ಹಾ ಉಪಸ್ಥಿತರಿದ್ದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






