ಶಿರ್ವ:ಮುದರಂಗಡಿಯ ಚರ್ಚ್ ಎದುರಿನಲ್ಲಿ ನಡೆದ ‘ಪ್ರಿನ್ಸ್ ಎಂಟರ್‌ಪ್ರೈಸಸ್’ ಮಾಲಕ ಡೇವಿಡ್ ಡಿಸೋಜಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಶಿರ್ವ ಠಾಣಾ ಪೊಲೀಸರು, ಕೃತ್ಯಕ್ಕೆ ಆರ್ಥಿಕ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳನ್ನು ಆಗಸ್ಟ್ 12ರಂದು ಬಂಧಿಸಿದ್ದಾರೆ.
ಹಣಕಾಸು ವರ್ಗಾವಣೆ ನೆರವು ನೀಡಿದ್ದ ಆರೋಪಿಗಳ ಬಂಧನ
ಕೃತ್ಯ ಎಸಗಿದ್ದ ದುಷ್ಕರ್ಮಿಗಳು ಮೋಟಾರ್ ಸೈಕಲ್‌ನಲ್ಲಿ ಬಂದು, ಹಿಂಬದಿ ಸವಾರನು ಡೇವಿಡ್ ಡಿಸೋಜಾ ಅವರ ತಲೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದನು. ಈ ಭೀಕರ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರ್ವ ಪೊಲೀಸರು, ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಮುಖ್ಯ ಆರೋಪಿಗಳನ್ನು ಈಗಾಗಲೇ ದಸ್ತಗಿರಿ ಮಾಡಿದ್ದರು.
ಬಂಧಿತ ಆರೋಪಿಗಳ ತೀವ್ರ ವಿಚಾರಣೆ ಹಾಗೂ ತನಿಖೆಯ ವೇಳೆ, ಕೊಲೆ ಕೃತ್ಯಕ್ಕಾಗಿ ಹಣ ವರ್ಗಾವಣೆ ಮಾಡಲು ನೆರವಾಗುವ ಮೂಲಕ ಪ್ರಮುಖ ಆರೋಪಿಗಳಿಗೆ ಸಹಕರಿಸಿದ ಇಬ್ಬರ ಪಾತ್ರ ಬೆಳಕಿಗೆ ಬಂದಿದೆ.
ಬಂಧಿತರನ್ನು ಕಾಪು ತಾಲೂಕಿನ ತೆಂಕ ಗ್ರಾಮದ ಎರ್ಮಾಳ್ ತೆಂಕ ಪ್ರದೇಶದ ನಿವಾಸಿಗಳಾದ ಚಿರಾಘ್ ಪೂಜಾರಿ (26) ಮತ್ತು ಮೊಹಮ್ಮದ್ ಇರ್ಷಾದ್ (43) ಎಂದು ಗುರುತಿಸಲಾಗಿದೆ.

ಬಂಧಿತರಿಬ್ಬರನ್ನೂ ಸುದೀರ್ಘ ವಿಚಾರಣೆಗೊಳಪಡಿಸಲಾಗಿದ್ದು, ಈ ಹತ್ಯೆ ಪ್ರಕರಣದ ಹಿಂದಿರುವ ಸಂಪೂರ್ಣ ಜಾಲವನ್ನು ಭೇದಿಸಲು ಶಿರ್ವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






