ದಿನಾಂಕ 16/02/2026 ರಂದು ಆನಂದ ಸುವರ್ಣ ಎಂಬುವವರು ಉಡುಪಿ ನಗರ ಸಭೆಗೆ ಹೋಗಿ, ತಾವು ಅವರ ಬಾಬ್ತು ಆಸ್ತಿ ಕಲ್ಮಾಡಿಯಲ್ಲಿರುವ ಕಟ್ಟಡ ನಂಬ್ರ 17-5 ಇದಕ್ಕೆ ಸಂಬಂದಪಟ್ಟಂತೆ 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು ರೂ. 34,730/- ನ್ನು ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿಕೊಂಡಿರುವ ಶಾಲಿನಿ ಎಂಬುವವರಿಗೆ ನೀಡಿದ್ದು, ಅದಕ್ಕೆ ಶಾಲಿನಿ ರವರು ದಿನಾಂಕ 16/10/2025 ರಂದು ತೆರಿಗೆ ಸ್ವೀಕೃತಿ ಆದ ಬಗ್ಗೆ ಸ್ವೀಕೃತಿಯನ್ನು ನೀಡಿರುತ್ತಾರೆ. ನಗರ ಸಭೆ ವತಿಯಿಂದ ಆಸ್ತಿ ತೆರಿಗೆ ಪಾವತಿ ಮಾಡಿದ ಬಗ್ಗೆ ಆನ್ ಲೈನ್ ಚೆಕ್ ಮಾಡಿದಾಗ ಪೆಂಡಿಂಗ್ ಇರುವುದು ಕಂಡು ಬಂದಿರುತ್ತದೆ. ನಂತರ ಈ ಬಗ್ಗೆ ಕಚೇರಿಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಶಾಲಿನಿ ರವರನ್ನು ಕರೆದು ವಿಚಾರಿಸಿದಾಗ ಅವರು ಆನಂದ ಸುವರ್ಣ ಎಂಬುವವರಿಂದ ತೆರಿಗೆ ಹಣವನ್ನು ಪಡೆದಿರುವುದು ನಿಜ ಎಂದು ಒಪ್ಪಿಕೊಂಡಿದ್ದು, ದಿನಾಂಕ 16/02/2026 ರಂದು ಆನಂದ ಸುವರ್ಣ ರವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು ರೂಪಾಯಿ 35,213/- ನ್ನು ಭರಿಸಿರುತ್ತಾರೆ. ಶಾಲಿನಿ ರವರು ಆನಂದ ಸುವರ್ಣ ಎಂಬುವವರು ನೀಡಿದ ತೆರಿಗೆ ಹಣವನ್ನು ಸರ್ಕಾರಕ್ಕೆ ಕಟ್ಟದೇ ಚಲನ್ ನಲ್ಲಿ ಯೂನಿಯನ್ ಬ್ಯಾಂಕ್ ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ, ಇನ್ನಿತರರೊಂದಿಗೆ ಸೇರಿ ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ ಎಂಬುದಾಗಿ ನಗರಸಭೆ ವತಿಯಿಂದ ನೀಡಲಾದ ದೂರಿನ ಅನ್ವಯ, ಉಡುಪಿ ನಗರ ಠಾಣೆ ಅಪರಾಧ ಕ್ರಮಾಂಕ :28/2026 ಕಲಂ: 336(2) 336(3) 340(2) 318(4) r/w 3(5) B N S ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್‌ನಿರೀಕ್ಷಕರರಾದ ಮಹೇಶ ಪ್ರಸಾದ್.ಪಿ. ನೇತೃತ್ವದಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಹಾಗೂ ಸಿಬ್ಬಂದಿಯವರಾದ ಸುರೇಂಧ್ರ ಅಬ್ದುಲ್ ಬಶೀರ , ಹೇಮಂತ , ಸವಿತಾ , ಪವಿತ್ರ ಹಾಗೂ ಸ್ಪೂರ್ತಿ ಅವರ ತಂಡ, ಪ್ರಕರಣದಲ್ಲಿ ಆರೋಪಿತರಾದ 1) ಬಿ. ಶಾಲಿನಿ(56), ತಂದೆ: ದಿವಂಗತ ವಿಠಲ ಶೇರೆಗಾರ, ಮಲ್ಪೆ ರೋಡ್, ಬನ್ನಂಜೆ , ಮೂಡನಿಡಂಬೂರು ಗ್ರಾಮ, ಉಡುಪಿ ಮತ್ತು 2) ಗಣೇಶ್ (24), ತಂದೆ; ಈಶ್ವರ್ ಶೇರಿಗಾರ್, ಸಚ್ಚಿದಾನಂದ ಲೇಔಟ್ , ಕುಕ್ಕಿಕಟ್ಟೆ ಉಡುಪಿ ಇವರುಗಳನ್ನು ದಿನಾಂಕ 20-02-026 ರಂದು ವಶಕ್ಕೆ ಪಡೆದು ದಸ್ತಗಿರಿ ಮಾಡಿ ಮಾನ್ಯ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







