ದಿನಾಂಕ 12/01/2026 ರಂದು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿ ಸಂಚಾರ ಪೊಲೀಸ್ ಠಾಣೆ ಮತ್ತು ಪೂರ್ಣ ಪ್ರಜ್ಞ ಪಿ.ಯು ಕಾಲೇಜು ಉಡುಪಿ ಇವರ ಸಹಯೋಗದಲ್ಲಿ “ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ – ಜನವರಿ-2026” ಪ್ರಯುಕ್ತ “ರಸ್ತೆ ಸುರಕ್ಷತೆ – ಜೀವನ ರಕ್ಷೆ” ಎಂಬ ಘೋಷ ವಾಕ್ಯದಡಿ ಪೂರ್ಣ ಪ್ರಜ್ಞ ಕಾಲೇಜಿನ ಸುಮಾರು 500 ವಿದ್ಯಾರ್ಥಿಗಳು ಮತ್ತು ಉಡುಪಿ ಸಂಚಾರ ಠಾಣೆಯ ಅಧಿಕಾರಿ ಸಿಬ್ಬಂದಿಗಳು, ಉಡುಪಿ ಸರ್ವೀಸ್ ಬಸ್ ಚಾಲಕರು ಮತ್ತು ನಿರ್ವಾಹಕರೊಂದಿಗೆ ಉಡುಪಿ ಸರ್ವೀಸ್ ಬಸ್ ನಿಲ್ದಾಣದಿಂದ ರಸ್ತೆ ಸುರಕ್ಷತಾ ಜಾಥ ಹೊರಟು ನಗರದ ಪ್ರಮುಖ ರಸ್ತೆಗಳ ಮುಖಾಂತರ ಪೂರ್ಣಪ್ರಜ್ಞ ಕಾಲೇಜಿನ ವರೆಗೆ ಕಾಲ್ನಡಿಗೆ ಜಾಥವನ್ನು ಘೋಷ-ಸಂದೇಶಗಳೊಂದಿಗೆ ನಡೆಸಲಾಯಿತು. ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಕಾಲ್ನಡಿಗೆ ಜಾಥಕ್ಕೆ ಚಾಲನೆಯನ್ನು ಹೂ ಹಾಕುವುದರ ಮೂಲಕ ನೆರವೆರಿಸಿರುತ್ತಾರೆ.
ನಂತರ ರಸ್ತೆ ಸುರಕ್ಷತಾ ಸಭೆಯ ಸಭಾ ಕಾರ್ಯಕ್ರಮವು ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಅಡಿಟೋರಿಯಂನಲ್ಲಿ ನಡೆದಿದ್ದು, ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸದ್ರಿ ಕಾರ್ಯಕ್ರಮದ ಉದ್ಘಾಟನೆಯನ್ನು ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರಾದ ಮನು ಪಟೇಲ್ ರವರು ನೆರವೆರಿಸಿ ರಸ್ತೆ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿರುತ್ತಾರೆ. ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ ರವರು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸೂಕ್ತ ಕಾನೂನು ತಿಳಿವಳಿಕೆ ನೀಡಿದ್ದು, ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರು ನುಡಿದಿರುತ್ತಾರೆ. ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಅನಿಲ್ ಕುಮಾರ್ ರವರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 750 ಜನ ಭಾಗವಹಿಸಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







