ಉಡುಪಿ ಜಿಲ್ಲೆಯ ಮಲ್ಪೆ ಪ್ರದೇಶದಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಸಂಸ್ಥೆಗೆ ಸಬ್‌ಕಾಂಟ್ರಾಕ್ಟ್ ಹೊಂದಿರುವ M/S Shushma Marine Private Limited ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬವರು, ಭಾರತೀಯ ನೌಕಾ ಸೇನೆಗೆ ಸಂಬಂಧಿಸಿದ ಹಡಗುಗಳ ಸಂಖ್ಯೆಗಳು ಸೇರಿದಂತೆ ಹಲವು ಗೌಪ್ಯ ಮಾಹಿತಿಗಳನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ ಅಕ್ರಮ ಲಾಭ ಪಡೆದಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025, ಕಲಂ 152 BNS ಹಾಗೂ Official Secrets Act, 1923ರ ಕಲಂ 3 ಮತ್ತು 5 ರಂತೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಹರ್ಷ ಪ್ರಿಯಂವದಾ ಐಪಿಎಸ್ ಅವರ ನೇತೃತ್ವದ ತಂಡ ನಡೆಸಿದ್ದು, ಆರೋಪಿಗಳಾದ ರೋಹಿತ್ ಹಾಗೂ ಸಂತ್ರಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತನಿಖೆಯನ್ನು ಮುಂದುವರಿಸಿದ ಪೊಲೀಸ್ ತಂಡ, ಆರೋಪಿಗಳಿಗೆ ಮೊಬೈಲ್ ಸಿಮ್ ಒದಗಿಸಿದ್ದ ಆರೋಪದಡಿ ಹೀರೇಂದ್ರ ಕುಮಾರ್ ಭರತ್ ಕುಮಾರ್ ಖಡಯಾತ್ (34), ಕೈಲಾಸ್ ನಗರಿ, ಆನಂದ ತಾಲೂಕು, ಗುಜರಾತ್ ಮೂಲದ ವ್ಯಕ್ತಿಯನ್ನು 21/12/2025 ರಂದು ದಸ್ತಗಿರಿ ಮಾಡಿದೆ. ಆರೋಪಿಯು ಹಣದ ಲಾಭಕ್ಕಾಗಿ ತನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದು ಆರೋಪಿಗಳಿಗೆ ನೀಡಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







