ದಿನಾಂಕ 14/12/2025 ರಂದು ಸಂಜೆ ವೇಳೆಗೆ ಮೃತ ಸಂತೋಷ್, ಸಚಿನ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್‌ರವರ ಬಾರ್‌ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಸರ್ಕಲ್‌ಗೆ ಬಂದು ಅಲ್ಲಿ ಊಟ ಮಾಡಿಕೊಂಡು ಮಾತನಾಡುತ್ತಿರುವಾಗ, ದರ್ಶನ್ ಮತ್ತು ಕೌಶಿಕ್, ಅಂಕಿತ ಹಾಗೂ ಸುಜನ್ ರವರು ಸಂತೋಷನ ಕುಟುಂಬದ ವಿಚಾರದಲ್ಲಿ ಮತ್ತು ಕುಡಿಯುವ ವಿಚಾರದಲ್ಲಿ ಮಾತುಕತೆ ಆಗಿ ಅವಾಚ್ಯವಾಗಿ ಮಾತನಾಡಿ ಜಗಳ ಮಾಡಿ ಸಂತೋಷನಿಗೆ ನಾಲ್ಕು ಜನರು ಸೇರಿ ಹೊಡೆದಿರುತ್ತಾರೆ. ಪರಸ್ಪರ ದೂಡಾಡಿಕೊಂಡಿದ್ದು, ದರ್ಶನ್ ನು ಸಂತೋಷನಿಗೆ ಕುತ್ತಿಗೆ ಹಿಂಬದಿ ಕೈಯಿಂದ ಬಲವಾಗಿ ಹೊಡೆದಿರುತ್ತಾನೆ. ಕೌಶಿಕನು ಸಂತೋಷನಿಗೆ ಕೈಯಿಂದ ಹೊಡೆದಿರುತ್ತಾನೆ. ಪಿರ್ಯಾದಿ ರಜತ್ ಇವರುಗಳ ಜಗಳ ತಪ್ಪಿಸಿರುತ್ತಾರೆ. ಅವರುಗಳು ಹೊಡೆದಿರುವುದರಿಂದ ಸಂತೋಷನು ಅಲ್ಲಿಯೇ ಕುಸಿದು ಬಿದ್ದಿದ್ದು, ಅದನ್ನು ನೋಡಿದ ಅವರೆಲ್ಲರೂ ಅಲ್ಲಿಂದ ಹೊರಟು ಹೋಗಿರುತ್ತಾರೆ. ಸಂತೋಷನಿಗೆ ಬಾಯಿಯಿಂದ ನೊರೆ ಬರುತ್ತಿದ್ದು ಮಾತನಾಡುತ್ತಿರಲಿಲ್ಲ. ಪಿರ್ಯಾದಿದಾರರು ಸಚಿನ್, ಚೇತನ್ ಮತ್ತು ಪ್ರಕಾಶ್ ರವರನ್ನು ಕರೆಸಿ ಸಂತೋಷನನ್ನು ಒಂದು ಕಾರಿನಲ್ಲಿ ಹಾಕಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿ ವೈದ್ಯರು ಸಂತೋಷನನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸಂತೋಷ ರವರಿಗೆ ದರ್ಶನ್, ಕೌಶಿಕ್ ಜೋಗಿ, ಅಂಕಿತ ಮತ್ತು ಸುಜನ್ರವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತಿಕವಾಗಿ ಹೊಡೆದು ಕೊಲೆ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ, ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 218/2025 ಕಲಂ: 103,115(2),352 ಜೊತೆ 3(5) BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ಆರೋಪಿಗಳಾದ 1)ದರ್ಶನ್(21), ಪಾರಂಪಳ್ಳಿ, ಪಡುಕೆರೆ, 2)ಕೌಶಿಕ್(21), ಸಾಸ್ತಾನ, ನೀರಾಡಿಜೆಡ್ಡು, ಪಾಂಡೇಶ್ವರ, 3)ಅಂಕಿತ(19), ಕೋಟತಟ್ಟು, ಪಡುಕೆರೆ ಮತ್ತು 4)ಸುಜನ್(21), ಕೋಟತಟ್ಟು, ಪಡುಕೆರೆ ರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ





